ಅಜ್ಮಾನ್: ತುಂಬೆ ಆಸ್ಪತ್ರೆಯ 16ನೇ ವಾರ್ಷಿಕೋತ್ಸವ

Update: 2018-10-22 16:48 GMT

ಅಜ್ಮಾನ್, ಅ.22: ಯುಎಇಯ ಅಜ್ಮಾನ್‌ನಲ್ಲಿರುವ ತುಂಬೆ ಆಸ್ಪತ್ರೆಯ 16ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಮಾತನಾಡಿದ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್, ತುಂಬೆ ಸಮೂಹ ಸಂಸ್ಥೆಗಳ ಪ್ರಪ್ರಥಮ ಆರೋಗ್ಯಸೇವಾ ಸಂಸ್ಥೆಯ 16ನೇ ವಾರ್ಷಿಕೋತ್ಸವ ಸಮೂಹ ಸಂಸ್ಥೆಗಳ ಪಯಣದಲ್ಲಿ ಒಂದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು.

ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ವಿವಿಯ ವಿದ್ಯಾರ್ಥಿಗಳಿಗೆ ಸಾಕಷ್ಟು ತರಬೇತಿಯ ವ್ಯವಸ್ಥೆ ಒದಗಿಸುವ ಮೂಲ ಉದ್ದೇಶದಿಂದ ಅಜ್ಮಾನ್‌ನಲ್ಲಿ ತುಂಬೆ ಆಸ್ಪತ್ರೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಶೀಘ್ರದಲ್ಲೇ ಆಸ್ಪತ್ರೆಯು ದೇಶದ ಜನಪ್ರಿಯ ಆರೋಗ್ಯಸೇವಾ ಸಂಸ್ಥೆಯಾಗಿ ಪ್ರಸಿದ್ಧಿ ಪಡೆಯಿತು. ಈ ಸ್ಫೂರ್ತಿಯಿಂದ ಸಂಸ್ಥೆಯು ಈಗ ಶೈಕ್ಷಣಿಕ ಆಸ್ಪತ್ರೆಗಳು, ಕುಟುಂಬ ವೈದ್ಯಕೀಯ ಕ್ಲಿನಿಕ್‌ಗಳು, ರೋಗನಿರ್ಣಯ (ಡಯಾಗ್ನೊಸ್ಟಿಕ್) ಕೇಂದ್ರಗಳ ಜಾಲವನ್ನು ಹೊಂದಿದ್ದು ಇವು ಯುಎಇ, ಭಾರತ ಹಾಗೂ ಆಫ್ರಿಕಾದಲ್ಲಿ ಸೇವೆ ಸಲ್ಲಿಸುತ್ತಿವೆ ಎಂದರು.

ತುಂಬೆ ಸಮೂಹ ಸಂಸ್ಥೆಯ ಆರೋಗ್ಯಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಮಾತನಾಡಿ, ತುಂಬೆ ಆಸ್ಪತ್ರೆಯ ಜಾಲ(ನೆಟ್‌ವರ್ಕ್)ವು ದೇಶದಲ್ಲಿ ಗುಣಮಟ್ಟದ ಆರೋಗ್ಯಸೇವೆಗೆ ಒಂದು ಮಾನದಂಡವಾಗಿ ಗುರುತಿಸಿಕೊಂಡಿದೆ. ಆರೋಗ್ಯಸೇವೆ ವಿಭಾಗವು ತಜ್ಞ ವೃತ್ತಿಪರರು ಹಾಗೂ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿದ್ದು, ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.

ವೈದ್ಯಕೀಯ ನಿರ್ದೇಶಕ ಡಾ.ಹಿಲಾಲ್ ಕಾಂತಿ ಪಾಲ್, ಸಂಸ್ಥೆಯ ಸಿಒಒ ಮುಹಮ್ಮದ್ ಅಬುಫರ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 2002ರಲ್ಲಿ ಅಜ್ಮಾನ್‌ನಲ್ಲಿ ಉದ್ಘಾಟನೆಗೊಂಡಿರುವ ತುಂಬೆ ಆಸ್ಪತ್ರೆ ಯುಎಇಯಲ್ಲಿರುವ ಪ್ರಪ್ರಥಮ ಖಾಸಗಿ ಬೋಧನಾ ಆಸ್ಪತ್ರೆ ಹಾಗೂ ಎಮಿರೇಟ್‌ನ ಪ್ರಪ್ರಥಮ ಜೆಸಿಐ ಅಂಗೀಕೃತ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News