×
Ad

ಸೌದಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ: ಹಿಂದೆ ಸರಿದ ಹಲವು ಜಾಗತಿಕ ವಾಣಿಜ್ಯ ಗುಂಪುಗಳು

Update: 2018-10-23 22:25 IST

ರಿಯಾದ್, ಅ. 23: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಂಗಳವಾರ ಆರಂಭಗೊಂಡಿದ್ದು, 5000 ಕೋಟಿ ಡಾಲರ್ ಮೌಲ್ಯದ ವ್ಯವಹಾರಗಳು ಏರ್ಪಡುವ ನಿರೀಕ್ಷೆಯಿದೆ.

ಆದರೆ, ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಮಂಕು ಕವಿದಿದೆ.

ಪತ್ರಕರ್ತನ ಬರ್ಬರ ಹತ್ಯೆಯನ್ನು ಖಂಡಿಸಿ ಪಾಶ್ಚಾತ್ಯ ರಾಜಕೀಯ ನಾಯಕರು, ಜಗತ್ತಿನ ಅಗ್ರಗಣ್ಯ ಬ್ಯಾಂಕರ್‌ಗಳು ಮತ್ತು ಕಂಪೆನಿಗಳ ಉನ್ನತಾಧಿಕಾರಿಗಳು ಈಗಾಗಲೇ ಸೌದಿ ಹೂಡಿಕೆ ಸಮಾವೇಶದಿಂದ ಹಿಂದೆ ಸರಿದಿದ್ದಾರೆ.

ರಿಯಾದ್‌ನ ಅರಮನೆಯಂಥ ಹೊಟೇಲೊಂದರಲ್ಲಿ ನಡೆದ ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್’ ಸಮಾವೇಶದಲ್ಲಿ ನೂರಾರು ಬ್ಯಾಂಕರ್‌ಗಳು ಮತ್ತು ಕಂಪೆನಿಗಳ ಉನ್ನತಾಧಿಕಾರಿಗಳು ಭಾಗವಹಿಸಿದರು.

ಕಳೆದ ವರ್ಷದ ಸಮಾವೇಶದಲ್ಲಿ ವಾಣಿಜ್ಯ ಜಗತ್ತಿನ ಘಟಾನುಘಟಿಗಳು ಭಾಗವಹಿಸಿದ್ದರೆ, ಈ ಬಾರಿ ಎರಡು ಡಝನ್‌ಗೂ ಅಧಿಕ ಜಾಗತಿಕ ವಾಣಿಜ್ಯ ಗುಂಪುಗಳು ಗೈರುಹಾಜರಾಗಿವೆ.

ಸಮಾವೇಶದಿಂದ ದೂರ ಉಳಿದ ಗಣ್ಯರು

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಕಿನ್ ಹಾಗೂ ಬ್ರಿಟನ್ ಮತ್ತು ಫ್ರಾನ್ಸ್‌ಗಳ ಹಿರಿಯ ಸಚಿವರು ಹೂಡಿಕೆ ಸಮಾವೇಶದಿಂದ ಹಿಂದೆ ಸರಿದಿದ್ದಾರೆ.

ಜೆಪಿ ಮೋರ್ಗನ್ ಚೇಸ್ ಮತ್ತು ಎಚ್‌ಎಸ್‌ಬಿಸಿಯಂಥ ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯಸ್ಥೆ ಕ್ರಿಸ್ಟೀನ್ ಲ್ಯಾಗರ್ಡ್ ಕೂಡ ಸಮಾವೇಶದಿಂದ ದೂರ ಉಳಿದಿದ್ದಾರೆ.

ಸೌದಿ ಅರೇಬಿಯ ಬಿಕ್ಕಟ್ಟಿನಲ್ಲಿ: ಸೌದಿ ಸಚಿವ

ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ಸಾವಿನ ಬಳಿಕ ವ್ಯಕ್ತವಾದ ಜಾಗತಿಕ ಆಕ್ರೋಶದ ಹಿನ್ನೆಲೆಯಲ್ಲಿ, ಸೌದಿ ಅರೇಬಿಯ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಸೌದಿ ಅರೇಬಿಯದ ಇಂಧನ ಸಚಿವ ಖಾಲಿದ್ ಅಲ್-ಫಲೀಹ್ ಹೇಳಿದ್ದಾರೆ.

‘‘ನಮಗೆ ಗೊತ್ತಿರುವಂತೆ ಇವು ಕಠಿಣ ದಿನಗಳು. ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ’’ ಎಂದು ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್’ನಲ್ಲಿ ಮಾತನಾಡಿದ ಅವರು ನುಡಿದರು.

‘‘ಖಶೋಗಿ ಹತ್ಯೆ ಅತ್ಯಂತ ಹೀನ ಘಟನೆ’’ ಎಂಬುದಾಗಿಯೂ ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News