ಪಾಕಿಸ್ತಾನಕ್ಕೆ 22,000 ಕೋಟಿ ರೂ. ನೆರವು

Update: 2018-10-24 15:11 GMT
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ರಿಯಾದ್, ಅ. 24: ಪಾಕಿಸ್ತಾನದ ಬಜೆಟ್ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುವ ನಿಟ್ಟಿನಲ್ಲಿ, ಅದಕ್ಕೆ 3 ಬಿಲಿಯ ಡಾಲರ್ (ಸುಮಾರು 22,000 ಕೋಟಿ ರೂಪಾಯಿ) ನೆರವು ನೀಡುವ ವಾಗ್ದಾನವನ್ನು ಸೌದಿ ಅರೇಬಿಯ ನೀಡಿದೆ ಹಾಗೂ ಆಮದು ಮಾಡಿಕೊಂಡ ತೈಲಕ್ಕೆ ಹಣ ಪಾವತಿ ಮಾಡುವುದನ್ನು ಮುಂದೂಡಲು ಅವಕಾಶ ನೀಡುವುದಾಗಿ ತಿಳಿಸಿದೆ.

ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಮಂಗಳವಾರ ಆರಂಭವಾದ ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್’ನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ ವೇಳೆ ಸೌದಿ ಅರೇಬಿಯ ಈ ಕೊಡುಗೆಯನ್ನು ಮುಂದಿಟ್ಟಿತು.

ಅದಕ್ಕೂ ಮೊದಲು ಇಮ್ರಾನ್ ಖಾನ್ ಸೌದಿ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು. ಇದು ಒಂದು ತಿಂಗಳ ಅವಧಿಯಲ್ಲಿ ಅವರು ಸೌದಿ ಅರೇಬಿಯಕ್ಕೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ.

 ‘‘ಸೌದಿ ಅರೇಬಿಯವು ಒಂದು ವರ್ಷದ ಅವಧಿಗೆ 3 ಬಿಲಿಯ ಡಾಲರ್ ಮೊತ್ತವನ್ನು ಪಾವತಿ ಶೇಷ (ಬ್ಯಾಲನ್ಸ್ ಆಫ್ ಪೇಮೆಂಟ್) ಬೆಂಬಲವಾಗಿ ಠೇವಣಿ ಇಡಲು ಒಪ್ಪಿಕೊಂಡಿತು’’ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಅದೇ ವೇಳೆ, 3 ಬಿಲಿಯ ಡಾಲರ್‌ವರೆಗಿನ ಮೊತ್ತದ ತೈಲ ಆಮದಿಗೆ ಒಂದು ವರ್ಷದ ಬಳಿಕ ಹಣ ಪಾವತಿ ಮಾಡುವ ಅವಕಾಶವನ್ನೂ ಸೌದಿ ಅರೇಬಿಯ ಪಾಕಿಸ್ತಾನಕ್ಕೆ ನೀಡಿದೆ. ಈ ವ್ಯವಸ್ಥೆಯು ಮೂರು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಬಳಿಕ ಅದನ್ನು ನವೀಕರಿಸಲಾಗುವುದು’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News