ಜಮಾಲ್ ಖಶೋಗಿ ಹತ್ಯೆ ‘ಪೂರ್ವಯೋಜಿತ’: ಸೌದಿ

Update: 2018-10-25 16:50 GMT

ರಿಯಾದ್, ಅ. 25: ಇಸ್ತಾಂಬುಲ್‌ನ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ‘ಪೂರ್ವಯೋಜಿತ’ ಎಂದು ಸೌದಿ ಅರೇಬಿಯ ಗುರುವಾರ ಹೇಳಿದೆ.

ಟರ್ಕಿ ನೀಡಿದ ಮಾಹಿತಿಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅದು ತಿಳಿಸಿದೆ ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

‘‘ಖಶೋಗಿ ಹತ್ಯೆಗೆ ಆರೋಪಿಗಳು ಪೂರ್ವ ಯೋಜನೆ ಹಾಕಿಕೊಂಡಿದ್ದರು ಎನ್ನುವುದನ್ನು ಟರ್ಕಿ ಅಧಿಕಾರಿಗಳು ನೀಡಿರುವ ಮಾಹಿತಿ ಸೂಚಿಸುತ್ತದೆ’’ ಎಂದು ಸೌದಿ ಪ್ರಾಸಿಕ್ಯೂಟರ್ ತಿಳಿಸಿದರು.

‘‘ಪ್ರಕರಣದ ತನಿಖೆಯ ಭಾಗವಾಗಿ ಶಂಕಿತರ ವಿಚಾರಣೆಯನ್ನು ಪಬ್ಲಿಕ್ ಪ್ರಾಸಿಕ್ಯೂಶನ್ ಮುಂದುವರಿಸಿದೆ’’ ಎಂದರು.

ಆರಂಭದಲ್ಲಿ ಜಮಾಲ್ ಹತ್ಯೆಯನ್ನು ಸೌದಿ ಅರೇಬಿಯ ಒಪ್ಪಿಕೊಂಡಿರಲಿಲ್ಲ. ಅಕ್ಟೋಬರ್ 2ರಂದು ಕೌನ್ಸುಲೇಟ್ ಪ್ರವೇಶಿಸಿದ ಬಳಿಕ ಅಗತ್ಯ ದಾಖಲೆಪತ್ರಗಳೊಂದಿಗೆ ಅವರು ಸ್ವತಂತ್ರವಾಗಿ ಹೊರಹೋಗಿದ್ದಾರೆ ಎಂದು ಹೇಳಿಕೊಂಡು ಬಂದಿತ್ತು.

ಆದರೆ, ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಕೌನ್ಸುಲೇಟ್‌ನಲ್ಲಿ ಅವರ ಹತ್ಯೆಯಾಗಿರುವುದನ್ನು ಶನಿವಾರ ಸೌದಿ ಅರೇಬಿಯ ಒಪ್ಪಿಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಇಬ್ಬರು ಪ್ರಮುಖ ಸಹಾಯಕರು ಮತ್ತು ಮೂವರು ಗುಪ್ತಚರ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಹಾಗೂ 18 ಮಂದಿಯನ್ನು ಬಂಧಿಸಲಾಗಿದೆ ಎಂಬುದಾಗಿ ಸೌದಿ ಅರೇಬಿಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News