×
Ad

ಸೌದಿ ಕೌನ್ಸುಲೇಟ್‌ನಲ್ಲಿ ಖಶೋಗಿಯನ್ನು ತುಂಡು ತುಂಡಾಗಿ ಕತ್ತರಿಸಲಾಯಿತು: ಟರ್ಕಿ ಪ್ರಾಸಿಕ್ಯೂಟರ್

Update: 2018-11-01 21:10 IST

ಅಂಕಾರ (ಟರ್ಕಿ), ನ. 1: ಸೌದಿ ಅರೇಬಿಯದ ಪ್ರಜೆ ಜಮಾಲ್ ಖಶೋಗಿ ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಪ್ರವೇಶಿಸಿದ ಕೂಡಲೇ ಅವರ ಕತ್ತು ಹಿಸುಕಲಾಯಿತು ಹಾಗೂ ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಯಿತು ಎಂದು ಟರ್ಕಿ ಪ್ರಾಸಿಕ್ಯೂಟರ್ ಬುಧವಾರ ಹೇಳಿದ್ದಾರೆ.

ಸೌದಿ ಅರೇಬಿಯದ ಪ್ರಭುತ್ವದ ಟೀಕಾಕಾರರಾಗಿದದ 59 ವರ್ಷದ ಪತ್ರಕರ್ತ ‘ವಾಶಿಂಗ್ಟನ್ ಪೋಸ್ಟ್’ಗೆ ಅಂಕಣಗಳನ್ನು ಬರೆಯುತ್ತಿದ್ದರು.

ಖಶೋಗಿ ಹತ್ಯೆಯ ತನಿಖೆಯಲ್ಲಿ ‘ಮನಃಪೂರ್ವಕ ಸಹಕರಿಸಲು’ ಸೌದಿ ಸಿದ್ಧವಿದೆಯೇ ಎಂಬ ಬಗ್ಗೆ ಟರ್ಕಿ ಸಂದೇಹ ವ್ಯಕ್ತಪಡಿಸಿದೆ.

ಸೌದಿ ಅರೇಬಿಯದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ, ಖಶೋಗಿ ಹತ್ಯೆ ಪ್ರಕರಣದಲ್ಲಿ ಟರ್ಕಿ ಅಧಿಕಾರಿಗಳೊಂದಿಗೆ ಸಹಕರಿಸಲು ಸೌದಿ ಅರೇಬಿಯ ಅಧಿಕಾರಿಗಳ ತಂಡವೊಂದನ್ನು ಟರ್ಕಿಗೆ ಕಳುಹಿಸಿಕೊಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಯಾವ ಪುರಾವೆ ಇದೆ ಎಂದು ತಿಳಿಯಲು ಸೌದಿ ಅಧಿಕಾರಿಗಳು ಉತ್ಸುಕ

ಹಂತಕರ ವಿರುದ್ಧ ಯಾವ ಪುರಾವೆ ಟರ್ಕಿ ಬಳಿ ಇದೆ ಎಂಬುದನ್ನು ಕಂಡುಹಿಡಿಯುವಲ್ಲಿ ಮಾತ್ರ ಸೌದಿ ಅಧಿಕಾರಿಗಳು ಆಸಕ್ತರಾಗಿರುವಂತೆ ಕಂಡುಬರುತ್ತಿದೆ ಎಂದು ಟರ್ಕಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ‘‘ಅವರು ತನಿಖೆಯಲ್ಲಿ ಪ್ರಾಮಾಣಿಕವಾಗಿ ಸಹಕರಿಸಲು ಉತ್ಸುಕರಾಗಿದ್ದಾರೆ ಎಂಬ ಭಾವನೆ ನಮಗೆ ಬಂದಿಲ್ಲ’’ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News