ಕೊಲ್ಲಿ ದೇಶಗಳಲ್ಲಿ ಪ್ರತಿದಿನ ಭಾರತದ 10 ಕೆಲಸಗಾರರ ಸಾವು

Update: 2018-11-05 16:39 GMT

ಹೊಸದಿಲ್ಲಿ, ನ. 5: ಕಳೆದ ಆರು ವರ್ಷಗಳ ಅವಧಿಯಲ್ಲಿ ಕೊಲ್ಲಿ ದೇಶಗಳಲ್ಲಿ ಪ್ರತಿ ದಿನ ಸುಮಾರು ಭಾರತೀಯ ಕೆಲಸಗಾರರು ಮೃತಪಟ್ಟಿದ್ದಾರೆ ಎಂದು ‘ಕಾಮನ್‌ವೆಲ್ತ್ ಹ್ಯೂಮನ್‌ರೈಟ್ಸ್ ಇನಿಶಿಯೇಟಿವ್’ ಸಂಘಟನೆ ಹೇಳಿದೆ.

ಇದರ ಪ್ರಕಾರ, ಭಾರತಕ್ಕೆ ಕಳುಹಿಸಲಾಗುವ ಪ್ರತಿ ಒಂದು ಬಿಲಿಯ ಅಮೆರಿಕ ಡಾಲರ್ (ಸುಮಾರು 7,334 ಕೋಟಿ ರೂಪಾಯಿ)ಗೆ 117 ಸಾವುಗಳು ಸಂಭವಿಸುತ್ತವೆ ಎಂದು ಮಾಹಿತಿ ಹಕ್ಕು ಮೂಲಕ ಪಡೆಯಲಾದ ಅಂಕಿಅಂಶಗಳ ಆಧಾರದಲ್ಲಿ ಸಂಘಟನೆಯ ವೆಂಕಟೇಶ್ ನಾಯಕ್ ಹೇಳುತ್ತಾರೆ.

2012 ಜನವರಿ 1ರಿಂದ 2018 ಮಧ್ಯಭಾಗದವರೆಗೆ ಬಹರೈನ್, ಒಮಾನ್, ಖತರ್, ಕುವೈತ್, ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳಲ್ಲಿ ಮೃತಪಟ್ಟ ಭಾರತೀಯ ಕೆಲಸಗಾರರ ವಿವರಗಳನ್ನು ವಿದೇಶ ವ್ಯವಹಾರಗಳ ಸಚಿವಾಲಯದಿಂದ ವೆಂಕಟೇಶ್ ನಾಯಕ್ ಕೋರಿದ್ದರು.

ಬಹರೈನ್, ಒಮಾನ್, ಖತರ್ ಮತ್ತು ಸೌದಿ ಅರೇಬಿಯಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸಂಬಂಧಪಟ್ಟ ಮಾಹಿತಿಗಳನ್ನು ನೀಡಿವೆ. ಆದರೆ, ಯುಎಇಯ ರಾಯಭಾರ ಕಚೇರಿ ಮಾಹಿತಿ ನೀಡಲು ನಿರಾಕರಿಸಿದೆ.

ಬಳಿಕ, ವೆಂಕಟೇಟ್ ಯುಎಇ ರಾಯಭಾರ ಕಚೇರಿಯ ವೆಬ್‌ಸೈಟ್ ಹಾಗೂ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ನೀಡಲಾಗಿರುವ ಉತ್ತರಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

‘‘ಲಭ್ಯವಿರುವ ಮಾಹಿತಿಗಳ ಪ್ರಕಾರ, 2012ರಿಂದ 2018ರ ಮಧ್ಯಭಾಗದವರೆಗೆ ಕನಿಷ್ಠ 24,570 ಭಾರತೀಯ ಕೆಲಸಗಾರರು ಆರು ಕೊಲ್ಲಿ ದೇಶಗಳಲ್ಲಿ ಮೃತಪಟ್ಟಿದ್ದಾರೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News