20ನೇ ವರ್ಷದ ಸಂಭ್ರಮದಲ್ಲಿ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯ

Update: 2018-11-06 13:59 GMT

ಅಜ್ಮಾನ್, ನ. 6: ಏಳು ಕಾಲೇಜುಗಳು ಮತ್ತು 26 ಮಾನ್ಯತೆ ಪಡೆದಿರುವ ಕೋರ್ಸ್‌ಗಳೊಂದಿಗೆ ಮಧ್ಯ ಪ್ರಾಚ್ಯ ಪ್ರದೇಶದಲ್ಲಿಯ ಅತ್ಯಂತ ದೊಡ್ಡ ವೈದ್ಯಕೀಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಜ್ಮಾನ್‌ನ ಗಲ್ಫ್ ಮೆಡಿಕಲ್ ವಿವಿ(ಜಿಎಂಯು)ಯು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಗಳಲ್ಲಿ ಅತ್ಯುತ್ಕೃಷ್ಟ ಸಾಧನೆಯ 20 ವರ್ಷಗಳನ್ನು ಪೂರ್ಣಗೊಳಿಸಿರುವ ಸಂಭ್ರಮದಲ್ಲಿದೆ.

ಜಿಎಂಯು ತನ್ನ 20ನೇ ವರ್ಷದ ಸಂದರ್ಭದಲ್ಲಿ ಈವರೆಗಿನ ತನ್ನ ಸಾಧನೆಗಳನ್ನು ಪ್ರತಿಬಿಂಬಿಸಲು ಮತ್ತು ಭವಿಷ್ಯದ ಯೋಜನೆಗಳು ಹಾಗೂ ಮಹತ್ವಾ ಕಾಂಕ್ಷೆಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ನ. 5ರಂದು ವಿಶೇಷ ಸಮಾರಂಭವೊಂದನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಎಂಯು ಸ್ಥಾಪಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ತುಂಬೆ ಮೊಹಿಯುದ್ದೀನ್ ಅವರು, ಜಿಎಂಯು 20 ವರ್ಷಗಳನ್ನು ಪೂರ್ಣಗೊಳಿಸಿರುವುದು ಅದರ ಬೆಳವಣಿಗೆ ಮತ್ತು ಯಶಸ್ಸಿನ ಪಥದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ. ಎರಡು ದಶಕಗಳ ಹಿಂದೆ ಪ್ರದೇಶದ ಮೊದಲ ಖಾಸಗಿ ವೈದ್ಯಕೀಯ ವಿವಿಯಾಗಿ ಆರಂಭಗೊಂಡಿದ್ದ ಅದು ಇಂದು ಭವಿಷ್ಯದ ದೃಷ್ಟಿಯ ವೈದ್ಯಕೀಯ ಶಿಕ್ಷಣವನ್ನು ಒದಗಿಸುತ್ತಿರುವ ಮತ್ತು ಇದೇ ಸಮಯದಲ್ಲಿ ಅತ್ಯಾಧುನಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಹಾಗೂ ವಿನೂತನ ಸಂಶೋಧನೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಪ್ರದೇಶದ ಏಕೈಕ ಖಾಸಗಿ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯಾಗಿ ಬೆಳೆದು ನಿಂತಿದೆ. ಆಧುನಿಕ ವೈದ್ಯಕೀಯ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಯ ಅತ್ಯಂತ ಜನಪ್ರಿಯ ಕೇಂದ್ರವಾಗಿ ಜಿಎಂಯು ಹೊರಹೊಮ್ಮುವಲ್ಲಿ ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮದ ಪಾಲು ಮಹತ್ವದ್ದಾಗಿದೆ. ನಿರಂತರವಾಗಿ ಹೊಸತನ್ನು ಸಾಧಿಸಬೇಕೆಂಬ ಜಿಎಂಯುದ ಸಿದ್ಧಾಂತ ಇದಕ್ಕೆ ಪೂರಕವಾಗಿದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ದೇವರ ಆಶೀರ್ವಾದವಿದೆ. ನಮ್ಮ ಈ ಪಯಣದಲ್ಲಿ ಸರಕಾರವು ನಮಗೆ ಅತ್ಯುತ್ತಮ ಬೆಂಬಲವನ್ನು ನೀಡಿದೆ ಎಂದು ಹೇಳಿದರು.

ಜಿಎಂಯು ಚಾನ್ಸಲರ್ ಪ್ರೊ. ಹೋಶಮ್ ಹಾಮ್ದಿ ಅವರು ಮಾತನಾಡಿ, ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಕಾಡಮಿಕ್ ಹೆಲ್ತ್ ಸಿಸ್ಟಮ್ ರೂಪದಲ್ಲಿ ವಿಶಿಷ್ಟ ಮಾದರಿಯನ್ನು ರೂಪಿಸುವ ಮೂಲಕ ಜಿಎಂಯು ಭವಿಷ್ಯದ ವೈದ್ಯಕೀಯ ಶಿಕ್ಷಣವು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಂಶೋಧನೆಗಳನ್ನು ಪರಸ್ಪರ ಜೋಡಿಸುವ ವ್ಯವಸ್ಥೆಯಾಗಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಿದೆ. ನಾವೀಗ ಏಳು ಕಾಲೇಜುಗಳು ಮತ್ತು 26 ಮಾನ್ಯತೆ ಪಡೆದಿರುವ ಕೋರ್ಸ್‌ಗಳನ್ನು ಹೊಂದಿದ್ದೇವೆ ಮತ್ತು ಹಲವಾರು ನೂತನ ಕೋರ್ಸ್‌ಗಳಿಗೆ ಶೀಘ್ರವೇ ಮಾನ್ಯತೆ ಲಭಿಸುವ ನಿರೀಕ್ಷೆಯಿದೆ ಎಂದರು. 2018-19ನೇ ಶೈಕ್ಷಣಿಕ ವರ್ಷಕ್ಕಾಗಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಂಭಗೊಂಡಿದೆ ಎಂದೂ ಅವರು ತಿಳಿಸಿದರು.

ತುಂಬೆ ಸಮೂಹದ ಆರೋಗ್ಯ ರಕ್ಷಣೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ವಿವಿಯ ಕಾಲೇಜುಗಳ ವೈಸ್ ಪ್ರೊವೊಸ್ಟ್ ಮತ್ತು ಡೀನ್‌ಗಳು, ಇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅರಿರೆನಾ ವಿವಿ, ವರ್ಜಿನಿಯಾ ಕಾಮನ್‌ವೆಲ್ತ್ ವಿವಿ, ಅಮೆರಿಕದ ಮಿಲ್ವಾಕಿಯ ಮೆಡಿಕಲ್ ಕಾಲೇಜ್ ಆಫ್ ವಿಸ್ಕನ್ಸಿನ್, ಕನೆಕ್ಟಿಕಟ್‌ನ ಯುನಿವರ್ಸಿಟಿ ಆಫ್ ಸೇಂಟ್ ಜೋಸೆಫ್ ಸ್ಕೂಲ್ ಆಫ್ ಫಾರ್ಮಸಿ, ಜರ್ಮನ್ ಹ್ಯೈಡೆಲ್‌ಬರ್ಗ್ ವಿವಿಯಂತಹ ವಿಶ್ಯಾದ್ಯಂತದ ಹಲವಾರು ಪ್ರತಿಷ್ಠಿತ ವಿವಿಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸದೃಢ ಸಹಭಾಗಿತ್ವವನ್ನು ಜಿಎಂಯು ಹೊಂದಿದೆ. ತನ್ನ ವಿದ್ಯಾರ್ಥಿಗಳು ಪದವಿ ಮುಗಿಸಿದ ಬಳಿಕ ಅವರನ್ನು ಉದ್ಯೋಗಕ್ಕೆ ಸನ್ನದ್ಧಗೊಳಿಸಲು ವರ್ಚುವಲ್ ಪೇಷಂಟ್ ಲರ್ನಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಜಿಎಂಯು ಬಳಸುತ್ತಿದೆ.

ಜಿಎಂಯು ಪ್ರತಿವರ್ಷವೂ ಹೊಸ ಹೊಸ ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಂದು ಈ ವಿವಿಯಲ್ಲಿ 80ಕ್ಕೂ ಅಧಿಕ ರಾಷ್ಟ್ರಗಳ ಸುಮಾರು 2,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಯುಎಸ್ ನ್ಯೂಸ್ ಜಿಎಂಯು ಮಧ್ಯ ಪ್ರಾಚ್ಯದಲ್ಲಿಯ ಉನ್ನತ 50 ವೈದ್ಯಕೀಯ ವಿವಿಗಳಲ್ಲಿ ಒಂದೆಂದು ಪರಿಗಣಿಸಿದೆ. ಜಿಎಂಯು 2018ರ ಪ್ರತಿಷ್ಠಿತ ಶೇಖ್ ಖಲೀಫಾ ಎಕ್ಸ್‌ಲೆನ್ಸ್ ಆವಾರ್ಡ್ಸ್‌ಗೂ ಭಾಜನವಾಗಿದೆ. ಅದು ಈ ವರ್ಷ ಪ್ರತಿಷ್ಠಿತ ದುಬೈ ಕ್ವಾಲಿಟಿ ಅಪ್ರಿಷಿಯೇಷನ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಮೂರು ವಿವಿಧ ರಾಷ್ಟ್ರಗಳಲ್ಲಿ ಮೂರು ಹೊಸ ವೈದ್ಯಕೀಯ ವಿವಿ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಮೂಲಕ ವಿಶ್ವದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದು ಜಿಎಂಯುದ ವ್ಯೆಹಾತ್ಮಕ ಯೋಜನೆಗಳಲ್ಲಿ ಸೇರಿದೆ. 2025ರ ವೇಳೆಗೆ ಸಂಶೋಧನೆ ಆಧರಿತ ವಿವಿಯಾಗಿ ಪರಿವರ್ತನೆಗೊಳ್ಳುವ ಮಹತ್ವಾಕಾಂಕ್ಷೆಯನ್ನು ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News