ಗಲ್ಫ್ ಮೆಡಿಕಲ್ ಯುನಿವರ್ಸಿಟಿ- ಈಜಿಪ್ಟ್‌ನ ಮಿಲಿಟರಿ ಅಕಾಡಮಿ ಮಧ್ಯೆ ಒಪ್ಪಂದ

Update: 2018-11-07 10:54 GMT

ಅಜ್ಮಾನ್, ನ. 7: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಪ್ರಮುಖ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯ ಆಗಿರುವ ಗಲ್ಫ್ ಮೆಡಿಕಲ್ ವಿವಿ (ಜಿಎಂಯು) ಹಾಗೂ ಈಜಿಪ್ಟ್‌ನ ಮಿಲಿಟರಿ ಮೆಡಿಕಲ್ ಅಕಾಡಮಿ(ಎಂಎಂಎ) ಮಧ್ಯೆ ಕಾರ್ಯ ತಂತ್ರದ ಪಾಲುದಾರಿಕೆ ನಿಟ್ಟಿನಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ನ. 5ರಂದು ಜಿಎಂಯು ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಎರಡು ಸಂಸ್ಥೆಗಳ ನಡುವಿನ ಒಪ್ಪಂದದ ತಿಳುವಳಿಕಾ ಪತ್ರಕ್ಕೆ ಜಿಎಂಯು ಕುಲಪತಿ ಪ್ರೊ. ಹೊಸ್ಸಾಂ ಹಮ್ದಿ ಹಾಗೂ ಈಜಿಪ್ಟ್‌ನ ಮಿಲಿಟರಿ ಮೆಡಿಕಲ್ ಅಕಾಡಮಿಯ ಅಧ್ಯಕ್ಷ ಡಾ. ಅಹ್ಮದ್ ಅಲ್-ತವೌದಿ ಸಹಿ ಹಾಕಿದರು.

ಎರಡು ಸಂಸ್ಥೆಗಳ ನಡುವಿನ ಸಂಬಂಧಗಳನ್ನು ವಿಧ್ಯುಕ್ತಗೊಳಿಸುವ ಅಧಿಕೃತ ಒಪ್ಪಂದ ಇದಾಗಿದೆ ಎಂದು ಪ್ರೊ. ಹೊಸ್ಸಾಂ ಹೇಳಿದ್ದಾರೆ. ಜಂಟಿ ಕಾರ್ಯಕ್ರಮ ಆಯೋಜನೆ, ಏವಿಯೇಷನ್ ಮೆಡಿಸಿನ್, ಡೈವಿಂಗ್ ಮೆಡಿಸಿನ್, ಮಾನಸಿಕ ಆಘಾತ ನಿರ್ವಹಣೆ ಇತ್ಯಾದಿ ವಿಭಾಗಗಳಲ್ಲಿ ತರಬೇತಿ ಮತ್ತು ವೃತ್ತೀಯ ಕಾರ್ಯದ ಅಭಿವೃದ್ಧಿ ಮುಂತಾದ ವಿಷಯಗಳು ಒಪ್ಪಂದದಲ್ಲಿ ಒಳಗೊಂಡಿದ್ದು, ಇವು ವಿದ್ಯಾರ್ಥಿಗಳಿಗೆ, ವೈದ್ಯರಿಗೆ ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿನಿರತರಿಗೆ ಸಹಾಯವಾಗಲಿದೆ ಎಂದವರು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಮೇಜರ್ ಜನರಲ್ ಡಾ. ಅಹ್ಮದ್ ಅಲ್-ತಹೌದಿ , ಗಲ್ಫ್ ಮೆಡಿಕಲ್ ಕಾಲೇಜು ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯ ಹಾಗೂ ಸಂಶೋಧನಾ ವ್ಯವಸ್ಥೆ ಒಳಗೊಂಡಿರುವ ಪ್ರಭಾವಶಾಲಿ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು. ಏವಿಯೇಷನ್ ಮೆಸಿಸಿನ್, ಡೈವಿಂಗ್ ಮೆಡಿಸಿನ್ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಯಾಗಿರುವ ಎಂಎಂಎ ಗಲ್ಫ್ ಪ್ರದೇಶದಲ್ಲಿ ಪ್ರಪ್ರಥಮ ಬಾರಿಗೆ ಜಿಎಂಯು ಜೊತೆ ಸಹಕಾರ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು. 

ಈ ಒಪ್ಪಂದ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ರೋಗಿಗಳಿಗೂ ಸಹಕಾರಿಯಾಗಿದೆ. ಚಿಕಿತ್ಸಕ ತರಬೇತಿಗೆ ವಿದ್ಯಾರ್ಥಿಗಳ ಪರಸ್ಪರ ವರ್ಗಾವಣೆಗೆ ಈ ಒಪ್ಪಂದ ನೆರವಾಗುತ್ತದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News