ಯುಎಇ: ಒಂದೇ ಗಂಟೆಯಲ್ಲಿ ಸುರಿದ 8 ತಿಂಗಳ ಮಳೆ !

Update: 2018-11-12 16:27 GMT

ದುಬೈ, ನ. 12: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ದಾಸ್ ಮತ್ತು ಖರ್ನೈನ್ ದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಯುಎಇಯ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.

ಅಬುಧಾಬಿ ಮತ್ತು ದುಬೈ ನಡುವಿನ ಪ್ರದೇಶವೊಂದರಲ್ಲಿ 8 ತಿಂಗಳ ಮಳೆ (49.4 ಮಿಲಿ ಮೀಟರ್) ರವಿವಾರ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸುರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ದೇಶದಲ್ಲಿ ಗಾಳಿ ಮತ್ತು ಮಳೆಯ ವಾತಾವರಣವಿರುತ್ತದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘‘ಹವಾಮಾನದಲ್ಲಿ ಕೊಂಚ ಬದಲಾವಣೆಯಾದರೂ ಯುಎಇಯ ಮೇಲೆ ಪರಿಣಾಮ ಬೀರುತ್ತದೆ. ಆಕಾಶದಲ್ಲಿ ಮೋಡದ ವಾತಾವರಣವಿದ್ದು, ಬಲವಾದ ಗಾಳಿ ಬೀಸುತ್ತದೆ. ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ದೃಗ್ಗೋಚರತೆ ಕಡಿಮೆ ಇರುತ್ತದೆ’’ ಎಂದು ಅವರು ಹೇಳಿದ್ದಾರೆ.

ರವಿವಾರ ಯುಎಇಯ ಹಲವು ಭಾಗಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಸುರಿದಿದೆ.

ದುಬೈಯ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಮಳೆ ಸುರಿದಿದೆ. ಡಿಸ್ಕವರಿ ಗಾರ್ಡನ್ಸ್ ಮತ್ತು ಅಲ್-ಖೋಝ್‌ನಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News