ಈ ಅರ್ಹತೆಗಳನ್ನು ಹೊಂದಿದ್ದರೆ ಇನ್ನು ಮುಂದೆ ದೀರ್ಘಾವಧಿ ಯುಎಇ ವೀಸಾ

Update: 2018-11-25 17:28 GMT

ದುಬೈ, ನ. 25: ಶ್ರೀಮಂತ ಆಸ್ತಿ ಹೂಡಿಕೆದಾರರು, ಹಿರಿಯ ವಿಜ್ಞಾನಿಗಳು ಮತ್ತು ಉದ್ಯಮಿಗಳಿಗೆ ದೀರ್ಘಾವಧಿ ವೀಸಾಗಳನ್ನು ನೀಡಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿರ್ಧರಿಸಿದೆ. ತೈಲ ಬೆಲೆ ಇಳಿಕೆಯಿಂದ ಘಾಸಿಗೊಂಡಿರುವ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಪುನಶ್ಚೇತನ ನೀಡುವ ಪ್ರಯತ್ನದ ಭಾಗವಾಗಿ ಅದು ಈ ಕ್ರಮವನ್ನು ತೆಗೆದುಕೊಂಡಿದೆ.

ಈವರೆಗೆ, ಅರಬ್ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಯುಎಇಯಲ್ಲಿ ನೆಲೆಸಲು ವಿದೇಶಿಯರಿಗೆ ನೀಡಲಾಗುವ ವೀಸಾಗಳ ಅವಧಿ ಸಾಮಾನ್ಯವಾಗಿ ಕೆಲವೇ ವರ್ಷಗಳದ್ದಾಗಿತ್ತು. ಅದೂ ಅಲ್ಲದೆ, ಯಾರಾದರೂ ವಿದೇಶಿಯರು ವೀಸಾ ಪಡೆಯಬೇಕೆಂದಿದ್ದರೆ, ಅವರ ಕುಟುಂಬದ ಸದಸ್ಯರೊಬ್ಬರು ಯುಎಇಯಲ್ಲಿ ಉದ್ಯೋಗದಲ್ಲಿರಬೇಕಾಗಿತ್ತು.

ಈ ನೀತಿಯನ್ನು ಬದಲಾಯಿಸಲು ನಿರ್ಧರಿಸಿರುವುದಾಗಿ ಯುಎಇ ಮೇ ತಿಂಗಳಲ್ಲಿ ಘೋಷಿಸಿತ್ತು.

ಈ ಸಂಬಂಧ ಯುಎಇ ಸಚಿವ ಸಂಪುಟ ಶನಿವಾರ ವಿವರವಾದ ನೂತನ ನಿಯಮಾವಳಿಗಳನ್ನು ಅಂಗೀಕರಿಸಿದೆ.

ನೂತನ ವೀಸಾ ನಿಯಮಾವಳಿಗಳು

*ಯುಎಇಯಲ್ಲಿ ಕನಿಷ್ಠ 5 ಮಿಲಿಯ ದಿರ್ಹಮ್ (ಸುಮಾರು 9.62 ಕೋಟಿ ರೂಪಾಯಿ) ಮೌಲ್ಯದ ಆಸ್ತಿಗಳನ್ನು ಹೊಂದಿದವರಿಗೆ 5 ವರ್ಷಗಳ ವಾಸ್ತವ್ಯ ವೀಸಾ ನೀಡಲಾಗುವುದು. ಆದರೆ, ಸಾಲ ಮಾಡಿ ಈ ಆಸ್ತಿಯನ್ನು ಖರೀದಿಸಿರಬಾರದು.

*ಯುಎಇಯಲ್ಲಿ ಕನಿಷ್ಠ 10 ಮಿಲಿಯ ದಿರ್ಹಮ್ (ಸುಮಾರು 19.24 ಕೋಟಿ ರೂಪಾಯಿ) ಬಂಡವಾಳ ಹೂಡಿಕೆ ಮಾಡಿದ ವಿದೇಶಿಯರಿಗೆ 10 ವರ್ಷಗಳ ಅವಧಿಯ ವೀಸಾವನ್ನು ನೀಡಲಾಗುವುದು ಹಾಗೂ ಈ ವೀಸಾವನ್ನು ನವೀಕರಿಸಬಹುದಾಗಿದೆ. ಆದಾಗ್ಯೂ, ಈ ಹೂಡಿಕೆಯಲ್ಲಿ ರಿಯಲ್ ಎಸ್ಟೇಟ್‌ಗೆ ಹೊರತಾದ ಹೂಡಿಕೆ 60 ಶೇಕಡದಷ್ಟಿರಬೇಕು.

*ಬಂಡವಾಳ ಹೂಡಿಕೆದಾರರು ತಮ್ಮ ಸಂಗಾತಿಗಳು ಮತ್ತು ಮಕ್ಕಳನ್ನು ಯುಎಇಗೆ ಕರೆತರಬಹುದಾಗಿದೆ.

*ಉದ್ಯಮಿಗಳಿಗೆ 5 ವರ್ಷಗಳ ವೀಸಾ ಮತ್ತು ಉನ್ನತ ವಿದ್ಯಾರ್ಹತೆಗಳಿರುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ 10 ವರ್ಷಗಳ ವೀಸಾಗಳನ್ನು ನೀಡಲು ಯುಎಇ ಮುಂದಾಗಿದೆ.

*ಪ್ರತಿಭಾವಂತ ವಿದ್ಯಾರ್ಥಿಗಳು 5 ವರ್ಷಗಳ ಕಾಲ ತಂಗಬಹುದಾಗಿದೆ.

ನಿವೃತ್ತಿ ಬಳಿಕವೂ ವಾಸ್ತವ್ಯ

ಯುಎಇ ಸರಕಾರ ಸೆಪ್ಟಂಬರ್‌ನಲ್ಲಿ ಅಂಗೀಕರಿಸಿದ ಕಾನೂನಿನ ಪ್ರಕಾರ, ಸುಮಾರು 5,45,000 ಡಾಲರ್ (ಸುಮಾರು 3.85 ಕೋಟಿ ರೂಪಾಯಿ) ಮೌಲ್ಯದ ಆಸ್ತಿ ಹೊಂದಿರುವ ವಿದೇಶಿಯರು ನಿವೃತ್ತಿ ಬಳಿಕವೂ ದೇಶದಲ್ಲಿ ವಾಸ್ತವ್ಯ ಮುಂದುವರಿಸಬಹುದಾಗಿದೆ.

ದೀರ್ಘಾವಧಿ ವೀಸಾಗಳಿಂದ ಪೌರತ್ವ ಲಭಿಸುವುದಿಲ್ಲ

ದೀರ್ಘಾವಧಿ ವೀಸಾಗಳು ಯುಎಇ ಪೌರತ್ವಕ್ಕೆ ರಹದಾರಿಯಾಗುವುದಿಲ್ಲ ಎನ್ನುವುದನ್ನು ನೂತನ ನಿಯಮಗಳು ಸ್ಪಷ್ಟಪಡಿಸಿವೆ.

ವಿದೇಶಿಯರಿಗೆ ಪೌರತ್ವವು ಸೂಕ್ಷ್ಮ ರಾಜಕೀಯ ವಿಷಯವಾಗಿದೆ. ಯುಎಇಯ ಸುಮಾರು 94 ಲಕ್ಷ ನಿವಾಸಿಗಳ ಪೈಕಿ ಮೂರನೇ ಎರಡರಷ್ಟು ಮಂದಿ ವಿದೇಶಿಯರು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News