ಗಲ್ಫ್ ಮೆಡಿಕಲ್ ವಿವಿ: ಪದವಿ ಪ್ರದಾನ ಸಮಾರಂಭ

Update: 2018-11-27 17:16 GMT

ಅಜ್ಮಾನ್, ನ. 27: ಗಲ್ಫ್ ಮೆಡಿಕಲ್ ವಿವಿ (ಜಿಎಂಯು)ಯ 15ನೇ ಪದವಿ ಪ್ರದಾನ ಸಮಾರಂಭ ಅಜ್ಮಾನ್‌ನ ಅಲ್ ಜರ್ಫ್‌ನಲ್ಲಿರುವ ಎಮಿರೇಟ್ಸ್ ಹಾಸ್ಪಿಟಾಲಿಟಿ ಸೆಂಟರ್‌ನಲ್ಲಿ ಸೋಮವಾರ ನಡೆಯಿತು.

ಯುಎಇಯ ಸುಪ್ರೀಂ ಕೌನ್ಸಿಲ್‌ನ ಸದಸ್ಯ ಹಾಗೂ ಅಜ್ಮಾನ್‌ನ ಆಡಳಿತಗಾರ ಶೇಖ್ ಹುಮೈದ್ ಬಿನ್ ರಶೀದ್ ಅಲ್ ನುವೈಮಿ 177 ಪದವೀಧರರಿಗೆ ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ವಿಶೇಷ ಅಧ್ಯಯನ ಮುಂದುವರಿಸಿ ವೃತ್ತಿ ಜೀವನದಲ್ಲಿ ಶ್ರೇಷ್ಠತೆ ಪಡೆಯುವಂತೆ, ಅಧ್ಯಯನದಲ್ಲಿ ದೊರೆತ ಜ್ಞಾನವನ್ನು ಸಮಾಜ ಮತ್ತು ರಾಷ್ಟ್ರದ ಒಳಿತಿಗಾಗಿ ಬಳಸುವಂತೆ ಕರೆ ನೀಡಿದರು.

58 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ, 22 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (ಬಿಪಿಟಿ) , 27 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ್‌ಡಿ), 33 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಡೆಂಟಲ್ ಮೆಡಿಸಿನ್ (ಡಿಎಂಡಿ), 19 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಬಯೊಮೆಡಿಕಲ್ ಸೈಯನ್ಸಸ್(ಬಿಬಿಎಂಎಸ್), 5 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಸೈಯನ್ಸ್- ಮೆಡಿಕಲ್ ಲ್ಯಾಬೊರೇಟರಿ ಸೈಯನ್ಸಸ್, 2 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಸೈಯನ್ಸ್- ಮೆಡಿಕಲ್ ಇಮೇಜಿಂಗ್ ಸೈಯನ್ಸಸ್, 4 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಹೆಲ್ತ್ ಸೈಯನ್ಸ್-ಅನಸ್ತೇಷಿಯಾ ಆ್ಯಂಡ್ ಸರ್ಜಿಕಲ್ ಟೆಕ್ನಾಲಜಿ, 4 ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಸೈಯನ್ಸ್ ಇನ್ ನರ್ಸಿಂಗ್, 3 ವಿದ್ಯಾರ್ಥಿಗಳಿಗೆ ಮಾಸ್ಟರ್ ಇನ್ ಟಾಕ್ಸಿಕೋಲಜಿ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಿಎಂಯು ಸ್ಥಾಪಕ, ಆಡಳಿತ ಮಂಡಳಿಯ ಅಧ್ಯಕ್ಷ ಡಾ ತುಂಬೆ ಮೊಯ್ದೀನ್, ಜಿಎಂಯು ಇದೀಗ 21ನೇ ವರ್ಷದ ಸಂಭ್ರಮದಲ್ಲಿದ್ದು ಈ ಪ್ರದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಅತೀ ಹೆಚ್ಚಿನ ಬೇಡಿಕೆಯಿರುವ ಖಾಸಗಿ ವೈದ್ಯಕೀಯ ವಿವಿಯಾಗಿ ಪರಿಗಣಿಸಲ್ಪಟ್ಟಿದೆ. ಜಿಎಂಯು ಇದೀಗ ವಿಶ್ವದಾದ್ಯಂತದ 70 ಸಂಸ್ಥೆಗಳೊಂದಿಗೆ ಸಹಯೋಗ ಒಪ್ಪಂದ ಮಾಡಿಕೊಂಡಿದ್ದು, ವಿವಿಯ ಕುಲಪತಿಯವರ ನಾಯಕತ್ವದಲ್ಲಿ ಅತ್ಯಾಧುನಿಕ , ನವೀನ ಶೈಕ್ಷಣಿಕ ಉಪಕ್ರಮಗಳನ್ನು ಅಳವಡಿಸಿ ಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಎಂಯುಗೆ ಸರ್ವರೀತಿಯ ಸಹಕಾರ ನೀಡುತ್ತಿರುವ ಶೇಖ್ ಹುಮೈದ್ ಬಿನ್ ರಶೀದ್ ಅಲ್ ನುವೈಮಿಯವರನ್ನು ಅವರು ಅಭಿನಂದಿಸಿದರು. ಜಿಎಂಯು ಕುಲಪರಿ ಪ್ರೊ. ಹೊಸ್ಸಾಂ ಹಾಮ್ದಿ ಮಾತನಾಡಿ, ಜಿಎಂಯು ಅಧೀನದ ಕಾಲೇಜುಗಳ ಸಂಖ್ಯೆ 6ಕ್ಕೆ ತಲುಪಿದ್ದು ಇಲ್ಲಿ ಕಲಿಸಲಾಗುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಸಂಖ್ಯೆಯೂ 15ರಿಂದ 25ಕ್ಕೆ ತಲುಪಿದೆ. ಈ ವರ್ಷ ವಿವಿಯು ಅರಿರೆನಾ ವಿವಿ, ವರ್ಜೀನಿಯಾ ಕಾಮನ್‌ವೆಲ್ತ್ ವಿವಿ, ಅಮೆರಿಕದ ಸೈಂಟ್ ಜೋಸೆಫ್ ವಿವಿ, ಜರ್ಮನ್ ಹೀಡೆಲ್‌ಬರ್ಗ್ ವಿವಿ ಸೇರಿದಂತೆ 10ಕ್ಕೂ ಅಧಿಕ ಪ್ರಮುಖ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿಸಿದರು.

ಅನುಭೂತಿ, ಪರಹಿತಚಿಂತನೆ, ಆತ್ಮಸಾಕ್ಷಿ, ಧೈರ್ಯ, ತಂಡದ ಕೆಲಸ ಹಾಗೂ ದೇವರ ಬಗ್ಗೆ ಭಯ ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವಿಡೀ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News