ಎನ್‌ಆರ್‌ಐಗಳ ಸಮಸ್ಯೆ ನಿವಾರಣೆಗಾಗಿ ಸಚಿವರಿಗೆ ಮನವಿ

Update: 2018-11-27 17:45 GMT

 ಅಬುಧಾಬಿ, ನ.27: ಯುಎಇಯಲ್ಲಿರುವ ಕರ್ನಾಟಕ ಮೂಲದ ಜನತೆಯ ಸಮಸ್ಯೆಗೆ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ (ಕೆಎನ್‌ಆರ್‌ಐ) ತ್ವರಿತವಾಗಿ ಸ್ಪಂದಿಸಿ ವೀಸಾ ಸಮಸ್ಯೆಯನ್ನು ಪರಿಹರಿಸಿದೆ. ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ. ಆದ್ದರಿಂದ ಕರ್ನಾಟಕ ಸರಕಾರ ಅಥವಾ ಕೇಂದ್ರ ಸರಕಾರ ನಮಗೆ ಸಹಕಾರ ನೀಡಿದರೆ ಅನಿವಾಸಿ ಭಾರತೀಯರ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಕೆಎನ್‌ಆರ್‌ಐ ಯುಎಇ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವರ್ಕಾಡಿ ಹೇಳಿದ್ದಾರೆ.

ಹೋಟೆಲ್ ಫಾರ್ಚ್ಯೂನ್ ಪ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತ್ತಿದ್ದರು. ವೀಸಾ, ವೇತನ, ಉದ್ಯೋಗದಲ್ಲಿ ಸಮಸ್ಯೆ, ವಿಮಾನ ಪ್ರಯಾಣ ದರದಲ್ಲಿ ವ್ಯತ್ಯಾಸ, ಕರ್ನಾಟಕದಿಂದ ಕೆಲವು ಪ್ರದೇಶಗಳಿಗೆ ನೇರ ವಿಮಾನ ಸೌಕರ್ಯ ಮುಂತಾದ ಹಲವು ಸಮಸ್ಯೆಗಳನ್ನು ಭಾರತೀಯರು ಎದುರಿಸುತ್ತಿದ್ದಾರೆ. ಈಗಾಗಲೇ ಸದಸ್ಯರಿಗೆ ಕೆಎನ್‌ಆರ್‌ಐ ಕಾರ್ಡ್‌ಗಳನ್ನು ವಿತರಿಸಲಾಗಿದೆ . ದಾಖಲೆಗಳ ಕ್ಷಿಪ್ರ ವಿಲೇವಾರಿ, ವಿಮೆ, ಮತದಾನದ ಹಕ್ಕು ಒದಗಿಸುವುದು ಮುಂತಾದ ಕಾರ್ಯಗಳಿಗೆ ಸಹಾಯವಾಗುವಂತೆ ಕರ್ನಾಟಕದ ಪ್ರತೀ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಎನ್‌ಆರ್‌ಐ ಹೆಲ್ಪ್ ಡೆಸ್ಕ್ ಆರಂಭಿಸುವಂತೆ ಅವರು ಮನವಿ ಮಾಡಿಕೊಂಡರು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ಎನ್‌ಆರ್‌ಐಗಳಿಗೆ ಕೇಂದ್ರದ ವಿದೇಶ ವ್ಯವಹಾರ ಸಚಿವಾಲಯದ ಸಹಕಾರದ ಅಗತ್ಯ ವಿದೆ. ಎನ್‌ಆರ್‌ಗಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಶೀಘ್ರ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಲಾಗುವುದು. ಕರ್ನಾಟಕದಲ್ಲಿ ಉದ್ಯಮ ಆರಂಭಿಸಲು ಅನುಕೂಲಕರ ಪರಿಸ್ಥಿತಿಯಿದ್ದು ಎನ್‌ಆರ್‌ಐಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮಾತನಾಡಿ, ತಮ್ಮ ಸರಕಾರ ಎನ್‌ಆರ್‌ಐ ಸರಕಾರವಲ್ಲ. ಆದರೂ ಸರಕಾರವು ಸಮಸ್ಯೆಯ ನಿವಾರಣೆಗೆ ತನ್ನ ಪರಿಮಿತಿಯೊಳಗೆ ಕ್ರಮ ಕೈಗೊಳ್ಳುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಜಯಮಾಲಾ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಬೇಕು ಎಂಬುದು ಸರಕಾರದ ಉದ್ದೇಶವಾಗಿದೆ. ಮತ ಚಲಾಯಿಸದ ವ್ಯಕ್ತಿಯ ಜೀವನ ಮೌಲ್ಯ ರಹಿತವಾಗಿರುತ್ತದೆ. ಆದ್ದರಿಂದ ಎನ್‌ಆರ್‌ಐಗಳ ಬೇಡಿಕೆಯಾದ ಮತದಾನದ ಹಕ್ಕಿನ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು.

ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ತಂಡದ ಜೋಸೆಫ್ ಮಥಾಯಸ್, ಬಿ.ಕೆ.ಗಣೇಶ್ ರೈ, ಮುಹಮ್ಮದ್ ಅಲಿ ಉಚ್ಚಿಲ್, ಅಫ್ರೋಝ್ ಅಸ್ಸಾದಿ, ದಯಾ ಕಿರೋಡಿಯನ್, ಎಂ.ಇ.ಮೂಳೂರು, ನೋಯೆಲ್ ಅಲ್ಮೇಡ, ಅಬ್ದುಲ್ ಲತೀಫ್ ಮುಲ್ಕಿ, ಸಿದ್ದಿಕ್ ಉಚ್ಚಿಲ್, ಅಲ್ತಾಫ್, ನಸೀರ್ ಖಾದರ್, ಮಲ್ಲಿಕಾರ್ಜುನ ಗೌಡ, ಪ್ರಶಾಂತ್ ಆಚಾರ್ಯ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಡಾ ಯು.ಟಿ.ಇಫ್ತಿಕಾರ್ ಆಲಿ, ನಾರಾಯಣ ದೇವಾಡಿಗ ಕಾಪು, ಸತೀಶ್ ಶೆಟ್ಟಿ ಪಟ್ಲ ಹಾಗೂ ಇತರರು ಉಪಸ್ಥಿತರಿದ್ದರು.

ಜಂಟಿ ಕಾರ್ಯದರ್ಶಿ ಶಶಿಧರ್ ನಾಗರಾಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಅಂಬಲಥಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಸಾದನ್ ದಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News