ವಿದ್ಯಾ ಸಂಸ್ಥೆಗಳು ಜಾತ್ಯತೀತವಾಗಿರಬೇಕು, ಜನರ ಪ್ರೀತಿ ಸೇತೋಷ ಎಲ್ಲಕ್ಕಿಂತ ಮಿಗಿಲು: ಸವಣೂರು ಸೀತಾರಾಮ ರೈ

Update: 2018-11-27 17:50 GMT

ದುಬೈ, ನ. 27: ಜಾತಿ ಆಧಾರಿತ ವಿದ್ಯಾ ಸಂಸ್ಥೆಗಳಿಂದ ಸಾಮಾಜಿಕ ಮೌಲ್ಯಯುತ ವಿದ್ಯಾಭ್ಯಾಸ ನೀಡಲು ಸಾಧ್ಯವಿಲ್ಲ, ವಿದ್ಯಾ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ಸಲ್ಲದು, ವಿದ್ಯಾ ಸಂಸ್ಥೆಗಳು ಜಾತ್ಯತೀತವಾಗಿರಬೇಕು ಮತ್ತು ವಿದ್ಯಾ ಸಂಸ್ಥೆಗಳಲ್ಲಿ ಸಾಮಾನ್ಯ ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆಯುಂತಿರಬೇಕು ಎಂದು ಅವರು ಸವಣೂರು ಚಾಪಲ್ಲ ಮುಸ್ಲಿಮ್ ಹೆಲ್ಪ್ ಲೈನ್ ಯುಎಇ ಸಮಿತಿ ನಗರದ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದರು.

ನಮ್ಮೂರಿನ ಸಾಮಾನ್ಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ  ಸವಣೂರಿನ ಹೃದಯ ಭಾಗದಲ್ಲಿ ಸುಮಾರು 25 ಎಕರೆ ವಿಶಾಲವಾದ ಪ್ರದೇಶದಲ್ಲಿ  ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸುತ್ತಿದ್ದೇನೆಯೇ ವಿನಃ ಯಾವುದೇ ವಾಣಿಜ್ಯ ಉದ್ದೇಶದಿಂದ ಮುನ್ನಡೆಸುತ್ತಿಲ್ಲ ಎಂದು ಹೇಳಿದರು.

ತಮ್ಮ ವಿದ್ಯಾ ಸಂಸ್ಥೆಯ ನಿರ್ಮಾಣಕ್ಕೆ ಮೊದಲು ಸವಣೂರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿರುವುದು ನಮ್ಮೂರಿನ ಜನರ ಏಳಿಗೆ, ಪ್ರೀತಿ ಮತ್ತು ಸಂತೋಷಕ್ಕಾಗಿ ಎಂದು ಅವರು ಹೇಳಿದರು.

ನಾವು ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಅನ್ಯೊನ್ಯವಾಗಿ ಬಾಳಬೇಕು ಜನರ ಪ್ರೀತಿ ಮತ್ತು ಸಂತೋಷ ಎಲ್ಲಕ್ಕಿಂತ ಮಿಗಿಲು ಎಂದು ಹೇಳುತ್ತಾ ತಮ್ಮ ಸಾರ್ಥಕ ಜೀವನದ ಮೆಟ್ಟಿಲುಗಳನ್ನು ಎಳೆ ಎಳೆಯಾಗಿ ಕಾರ್ಯಕ್ರಮದಲ್ಲಿ ತೆರೆದಿಟ್ಟು ನೆರೆದವರನ್ನು ರೋಮಾಂಚನಗೊಳಿಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಯುಎಇ ಪ್ರವಾಸ ದಲ್ಲಿರುವ ವಿದ್ಯಾರಶ್ಮಿ ಸಂಸ್ಥೆಯ ಸ್ಥಾಪಕ ಕೆ ಸೀತಾರಾಮ ರೈ ಅವರಿಗೆ ಕಿರು ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕರಾದ ಅಶ್ವಿನ್ ಶೆಟ್ಟಿ, ಆದರ್ಶ ಕೊ-ಆಪರೇಟಿವ್ ಸೊಸೈಟಿ ಡೈರೆಕ್ಟರ್ ಕೆನ್ಯ ರವೀಂದ್ರನಾಥ್ ಶೆಟ್ಟಿ, ರಿಟೈರ್ಡ್ ಕಇಬಿ ಚೀಫ್ ಇಂಜಿನಿಯರ್ ಮಹಾದೇವ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಝೈನುದ್ದೀನ್ ಎಸ್ ಎಮ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಸಲಹೆಗಾರರು, ಈಡನ್ ಗ್ಲೋಬಲ್ ಬೆಳಂದೂರು ಶಾಲೆಯ ಟ್ರಸ್ಟಿ, ಉದ್ಯಮಿ ಅಶ್ರಫ್ ಶಾ ಮಾಂತೂರು ಅವರು ಮಾತನಾಡಿ ಸವಣೂರು ಎಂಬ ಗ್ರಾಮಾಂತರ ಪ್ರದೇಶವನ್ನು ಭಾರತದ ಭೂಪಟದಲ್ಲಿ ಶೈಕ್ಷಣಿಕವಾಗಿ ಗುರುತಿಸಿರುವ ಮಾನ್ಯ ಸೀತಾರಾಮ ರೈ ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಕರ್ತವ್ಯ ಆದ್ದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.

ಕಾರ್ಯಕ್ರಮದ ಅತಿಥಿ ಅಹ್ಮದ್ ನಯೀಂ ಮುಖ್ವೆ ಅವರು ಮಾತನಾಡಿ ಜ್ಞಾನವೇ ಬೆಳಕು, ಜ್ಞಾನವಿಲ್ಲದ ಪ್ರದೇಶ ಕತ್ತಲು ತುಂಬಿಕೊಂಡಿರುತ್ತದೆ. ಇದನ್ನು ದಶಕಗಳ ಹಿಂದೆ ಅರ್ಥೈಸಿಕೊಂಡ ಹೃದಯ ಶ್ರೀಮಂತಿಕೆಯ ಸೀತಾರಾಮ ರೈ ಅವರು ಎಲ್ಲರೊಂದಿಗೆ ಬೆರೆತು ಸೌಹಾರ್ದತೆಯಿಂದ ಭವ್ಯ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿದು ಸವಣೂರು ಎಂಬ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾ ಸಂಸ್ಥೆಗಳು ಕಟ್ಟಿ ಬೆಳೆಸಿ ಜ್ಞಾನದ ರಶ್ಮಿಯನ್ನು ಬೆಳಗಿಸಿದರು ಎಂದು ಹೇಳಿ ಕಾರ್ಯಕ್ರಮವನ್ನು ಪವಿತ್ರ ಕುರಾನ್ ಸೂಕ್ತದೊಂದಿಗೆ ಉದ್ಘಾಟಿಸಿದರು.

ಕೋಶಾಧಿಕಾರಿ ಅಬ್ಬಾಸ್ ಕೇಕುಡೆ ವಂದಿಸಿದರು ಹಾಗೂ ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಹಾಬಲ ಶೆಟ್ಟಿ ಮತ್ತು ಸಮಿತಿಯ ಪದಾಧಿಕರಿಗಳಾದ ಶಾಕಿರ್ ಸವಣೂರು, ಅಶ್ರಫ್ ಆರ್ತಿಗೆರೆ, ಸೆಲೀಂ ಎಸ್ ಎಮ್, ರಫೀಕ್ ಎಂ ಎಸ್, ಯಾಕೂಬ್ ಸವಣೂರು, ಜಾಫರ್ ಸೋಂಪಾಡಿ, ಜಾಫರ್ ಆರಿಗೆ ಮಜಲು ಅಲ್ಲದೆ ಅಸ್ಗರ್ ಅಲೀ ತಂಙಲ್, ಶೆರೀಫ್ ಕಾವು, ಅಬ್ದುಲ್ ಸಲಾಮ್ ಬಪ್ಪಲಿಗೆ, ಇಶಾಕ್ ಹಾಜಿ ತೋಡಾರು, ಜಬ್ಬಾರ್ ಬೈತಡ್ಕ, ಆಸಿಕ್ ಕೂರ್ನಡ್ಕ, ಆರಿಫ್ ಕೂರ್ನಡ್ಕ,  ಆಸಿಫ್ ಮರೀಲ್ ಇವರನ್ನೊಳಗೊಂಡ ಮಾನ್ಯ  ಸೀತಾರಾಮ ರೈ ಅವರ ಅಭಿಮಾನಿಗಳು ಉಪಸ್ತಿತರಿದ್ದರು.

Writer - ಅಝೀಝ್ ಸೋಂಪಾಡಿ

contributor

Editor - ಅಝೀಝ್ ಸೋಂಪಾಡಿ

contributor

Similar News