ರಿಯಾದ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಳೆಪುಣಿಯ ಯುವಕನಿಗೆ ಐಎಸ್‌ಎಫ್ ನೆರವು

Update: 2018-11-28 08:48 GMT

ರಿಯಾದ್, ನ.28: ರಿಯಾದ್‌ನಲ್ಲಿ ಔದ್ಯೋಗಿಕ ಸಮಸ್ಯೆಗೆ ಸಿಲುಕಿ ತೀರಾ ಸಂಕಷ್ಟಕ್ಕೊಳಗಾಗಿದ್ದ ಮುಡಿಪು ಬಾಳೆಪುಣಿಯ ಯುವಕನೋರ್ವನನ್ನು ಇಂಡಿಯನ್ ಸೋಶಿಯಲ್ ಫೋರಂ (ಐಎಸ್‌ಎಫ್) ರಿಯಾದ್ ಘಟಕವು ಸುರಕ್ಷಿತವಾಗಿ ತಾಯ್ನಿಡಿಗೆ ಕಳುಹಿಸುವಲ್ಲಿ ಸಫಲವಾಗಿದೆ.

ಮುಡಿಪು ಬಾಳೆಪುಣಿ ನಿವಾಸಿ ಮುಹಮ್ಮದ್ ಶರೀಫ್ ಎಂಬವರು ಕಳೆದೊಂದು ವರ್ಷದ ಹಿಂದೆ ಹೌಸ್ ಡ್ರೈವರ್ ವೀಸಾದಲ್ಲಿ ರಿಯಾದ್ ನಗರಕ್ಕೆ ಬಂದಿದ್ದರು. ಆದರೆ ಮನೆಯೊಡತಿ (ಕಫೀಲ್) ವಾಹನ ಪರವಾನಿಗೆ ಮಾಡಿಕೊಡದೆ ವಾಹನದಲ್ಲಿ ರಸ್ತೆಬದಿ ಊಟೋಪಹಾರ ಮಾರುವ ಕೆಲಸವನ್ನು ನೀಡಿದ್ದರು. ಸರಿಯಾಗಿ ಸಂಬಳವನ್ನೂ ನೀಡದೆ ದಿನದ ಹದಿನಾರು ಗಂಟೆಗಳ ಕಾಲ ದುಡಿಸುತ್ತಿದ್ದರು. ದೈಹಿಕ ಹಿಂಸೆ ಕೂಡಾ ನೀಡುತ್ತಿದ್ದರು. ಅವೆಲ್ಲವನ್ನು ಸಹಿಸಿ ಶರೀಫ್ ಒಂದು ವರ್ಷ ಅಲ್ಲಿ ದುಡಿದಿದ್ದರು. ಆದರೆ ಕಳೆದ ನಾಲ್ಕುವರೆ ತಿಂಗಳಿನಿಂದ ಸಂಬಳ ಲಭಿಸದಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ಅನಾರೋಗ್ಯ ಪೀಡಿತರಾಗಿ ಕೆಲಸಕ್ಕೆ ಹೋಗದೆ ತಪ್ಪಿಸಿಕೊಂಡಿದ್ದರು. ಈ ವೇಳೆ ಮನೆಯೊಡತಿ ಶರೀಫ್ ವಿರುದ್ಧ ಪಲಾಯನ (ಉರೂಬ್) ಕೇಸು ದಾಖಲಿಸಿದ್ದರು. ಇದು ಶರೀಫ್ ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿತು.

ಈ ನಡುವೆ ಶರೀಫ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದು, ನೆರವನ್ನು ಯಾಚಿಸಿದ್ದರು. ಇದನ್ನು ಗಮನಿಸಿದ ಇಂಡಿಯನ್ ಸೋಶಿಯಲ್ ಫೋರಂನ ರಿಯಾದ್ ಘಟಕವು ಶರೀಫ್‌ರನ್ನು ಸಂಪರ್ಕಿಸಿತ್ತು. ಶರೀಫ್ ಪರವಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ಕೂಡಾ ದಾಖಲಿಸಿತ್ತು. ಆದರೆ ಮನೆಯೊಡತಿಯ ನಿರಾಸಕ್ತಿಯಿಂದ ಕಾರ್ಮಿಕ ನ್ಯಾಯಾಲಯವು ಪ್ರಕರಣವನ್ನು ಮೇಲಿನ ಹಂತದ ಕೋರ್ಟಿಗೆ ವರ್ಗಾಯಿಸಿತು. ಈ ಹಿನ್ನೆಲೆಯಲ್ಲಿ ಪ್ರಕರಣ ದೀರ್ಘಾವಧಿಯಲ್ಲಿ ಮುಂದುವರಿಯುವುದನ್ನು ಮನಗಂಡು ಇಂಡಿಯನ್ ಸೋಶಿಯಲ್ ಫೋರಂ ಶರೀಫ್‌ರನ್ನು ತವರಿಗೆ ಕಳುಹಿಸಲು ಮುಂದಾಯಿತು. ಈ ನಿಟ್ಟಿನಲ್ಲಿ ದಾನಿಗಳ ನೆರವಿನಿಂದ ಭಾರತೀಯ ದೂತವಾಸವನ್ನು ಸಂಪರ್ಕಿಸಿ ತವರಿಗೆ ಕಳುಹಿಸಲು ಅಗತ್ಯ ದಾಖಲೆ ಪತ್ರಗಳನ್ನು ಸಿದ್ಧಪಡಿಸಿತು. ಅದರಂತೆ ಮಂಗಳವಾರವೇ ಅವರನ್ನು ಊರಿಗೆ ಕಳುಹಿಸಲಾಯಿತು ಎಂದು ಐಎಸ್‌ಎಫ್ ರಿಯಾದ್ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
   
ಈ ಕಾರ್ಯದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರಾದ ಸಾಬಿತ್ ಹಸನ್ ಬಜ್ಪೆ, ರಹ್ಮಾನ್ ತುಂಬೆ, ಶಬೀರ್ ಮುಡಿಪು, ಅಬ್ದುಲ್ ಸಾಬಿತ್ ಬಜ್ಪೆಶ್ರಮಿಸಿದ್ದಾರೆ. ಬುಧವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶರೀಫ್ ಅವರನ್ನು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟೆ, ಜಿಲ್ಲಾ ಸಮಿತಿಯ ಸದಸ್ಯ ಇಸ್ಮಾಯೀಲ್ ಇಂಜಿನಿಯರ್, ಹಮೀದ್ ಬಜ್ಪೆ, ರಹೀಮ್ ಭಟ್ರಕೆರೆ ಸ್ವಾಗತಿಸಿದರು.


ಐಎಸ್‌ಎಫ್ ಪದಾಧಿಕಾರಿಗಳು ನನ್ನನ್ನು ಸಹೋದರನಂತೆ ನೋಡಿಕೊಂಡರು: ಶರೀಫ್
ರಿಯಾದ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಾನು ಇಂದು ಸುರಕ್ಷಿತವಾಗಿ ತವರು ತಲುಪಲು ಇಂಡಿಯನ್ ಸೋಶಿಯಲ್ ಫೋರಂ ಕಾರಣ. ಅವರ ಸಹಾಯಹಸ್ತವಿಲ್ಲದಿದ್ದಲ್ಲಿ ನಾನಿಂದು ಮನೆ ಸೇರುತ್ತಿರಲಿಲ್ಲ. ಅವರ ಸಹಾಯಕ್ಕೆ ನಾನೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನ್ನನ್ನು ಸ್ವಂತ ಸಹೋದರನಂತೆ ಐಎಸ್‌ಎಫ್ ಪದಾಧಿಕಾರಿಗಳು ನೋಡಿಕೊಂಡರು ಎಂದು ಮುಹಮ್ಮದ್ ಶರೀಫ್ ಭಾವುಕರಾಗುತ್ತಾರೆ.

ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶರೀಫ್, ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ತಾನು ರಿಯಾದ್‌ನಲ್ಲಿ ಅನುಭವಿಸಿದ ಸಂಕಷ್ಟ ಹಾಗೂ ಇಂಡಿಯನ್ ಸೋಶಿಯಲ್ ಫೋರಂನ ಸಹಾಯವನ್ನು ಧನ್ಯತಾಭಾವದಿಂದ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News