ಖಶೋಗಿ ಹತ್ಯೆಯಲ್ಲಿ ಯುವರಾಜ ಸಲ್ಮಾನ್ ಪಾತ್ರವನ್ನು ಸೂಚಿಸುವ ಸ್ಪಷ್ಟ ಪುರಾವೆಯಿಲ್ಲ: ಮೈಕ್ ಪಾಂಪಿಯೊ

Update: 2018-11-29 15:04 GMT

ವಾಶಿಂಗ್ಟನ್, ನ. 29: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಆ ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಶಾಮೀಲಾಗಿದ್ದಾರೆ ಎನ್ನುವುದನ್ನು ಸೂಚಿಸುವ ಸ್ಪಷ್ಟ ಪುರಾವೆಯಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ಹೇಳಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿದ್ದ ಖಶೋಗಿ ತನ್ನ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು. ಅಲ್ಲಿ ಅವರನ್ನು ಸೌದಿ ಅರೇಬಿಯದಿಂದ ಬಂದಿದ್ದ 15 ಸದಸ್ಯರ ತಂಡವೊಂದು ಹತ್ಯೆಗೈದಿತ್ತು.

ಖಶೋಗಿ ಪ್ರಕರಣದ ಬಗ್ಗೆ ರಹಸ್ಯ ಸೆನೆಟ್ ಸಭೆಗೆ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಜೊತೆ ವಿವರಣೆ ನೀಡಿದ ಬಳಿಕ ಪಾಂಪಿಯೊ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಖಶೋಗಿ ಹತ್ಯೆಯ ಹಿನ್ನೆಲೆಯಲ್ಲಿ ದುರ್ಬಲಗೊಳ್ಳುತ್ತಿರುವ ಸೌದಿ-ಅಮೆರಿಕ ಸಂಬಂಧವು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿದೆ ಎಂಬುದಾಗಿ ಅವರು ಸೆನೆಟ್‌ಗೆ ಹೇಳಿದರು ಎನ್ನಲಾಗಿದೆ.

‘‘ಖಶೋಗಿ ಹತ್ಯೆಗೆ ಸೌದಿ ಯುವರಾಜ ಆದೇಶ ನೀಡಿದ್ದಾರೆ ಎನ್ನುವುದನ್ನು ಸೂಚಿಸುವ ನೇರ ಪುರಾವೆಯಿಲ್ಲ’’ ಎಂದು ಪಾಂಪಿಯೊ ಹೇಳಿದರು.

ಖಶೋಗಿ ಹತ್ಯೆಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದಾರೆ ಎಂಬ ತೀರ್ಮಾನಕ್ಕೆ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಬಂದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News