ಫುಜೈರಾಹ್-ಮುಂಬೈ ನಡುವೆ ಜಲಾಂತರ್ಗಾಮಿ ರೈಲು ಯೋಜನೆ !

Update: 2018-11-30 09:32 GMT

ಅಬುಧಾಬಿ,ನ.30 : ಹೊಸ ಹೊಸ ಆವಿಷ್ಕಾರಗಳಿಗೆ ಹೆಸರಾದ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಹೈಪರ್‍ಲೂಪ್ ಹಾಗೂ ಚಾಲಕರಹಿತ ಹಾರುವ ಕಾರುಗಳ ನಂತರ ಈಗ ಇನ್ನೊಂದು ಭವಿಷ್ಯದ ಯೋಜನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೇ ಜಲಾಂತರ್ಗಾಮಿ ರೈಲು ಜಾಲ. ಈ ರೈಲು ಜಾಲ ಸಂಯುಕ್ತ ಅರಬ್ ಸಂಸ್ಥಾನದ ಫುಜೈರಾಹ್ ಹಾಗೂ ಭಾರತದ ಮುಂಬೈ ನಡುವೆ ಭವಿಷ್ಯದಲ್ಲಿ ಸಂಪರ್ಕ ಕಲ್ಪಿಸಲಿದೆ ಎಂದು khaleejtimes.com ವರದಿ ಮಾಡಿದೆ.

ಜನರ ಪ್ರಯಾಣಕ್ಕೆ ಮಾತ್ರವಲ್ಲ ಸರಕು ಸಾಗಣಿಕೆಗೂ ಈ ಜಾಲ ಉಪಯೋಗವಾಗಲಿದೆ. ಭಾರತದಿಂದ ಸಂಯುಕ್ತ ಅರಬ್ ಸಮಸ್ಥಾನಕ್ಕೆ ಸಮುದ್ರದ ಅಡಿಯಿಂದಲೇ ನದಿ ನೀರು ಸರಬರಾಜಾಗಲಿದೆಯಾದರೆ ಅಲ್ಲಿಂದ ಭಾರತಕ್ಕೆ ಪೈಪ್ ಲೈನ್ ಮೂಲಕ ತೈಲ ರಪ್ತಾಗಲಿದೆ ಎಂದು ದೇಶದ  ನ್ಯಾಷನಲ್ ಅಡ್ವೈಸರ್ ಬ್ಯುರೋದ ಮುಖ್ಯ ಕನ್ಸಲ್ಟೆಂಟ್ ಹಾಗೂ ಆಡಳಿತ ನಿರ್ದೇಶಕ ಅಬ್ದುಲ್ಲಾ ಅಲ್ಶೇಹ್ಹಿ ಹೇಳಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಯುಎಇ-ಇಂಡಿಯಾ ಕಾಂಕ್ಲೇವ್ ಸಂದರ್ಭ ಮಾತನಾಡುತ್ತಿರುವಾಗ ಅವರು ಮೇಲಿನ ಮಾಹಿತಿ ನೀಡಿದ್ದಾರೆ. ಮಸ್ದರ್ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ ನ್ಯಾಷನಲ್ ಅಡ್ವೈಸರ್ ಬ್ಯುರೋದ ಸ್ಥಾಪಕರಾಗಿದ್ದಾರೆ ಅಲ್ಶೇಹ್ಹಿ. ಹಲವಾರು ಸ್ಟಾರ್ಟ್-ಅಪ್‍ಗಳ ಅಭಿವೃದ್ಧಿಗೆ ಈ ಸಂಸ್ಥೆ ಸಹಾಯ ಮಾಡಿದೆ.

ತೇಲುವ ಜಲಾಂತರ್ಗಾಮಿ ರೈಲು ಜಾಲದಿಂದ ಸಂಯುಕ್ತ ಅರಬ್ ಸಂಸ್ಥಾನ ಮಾತ್ರವಲ್ಲದೆ ಭಾರತ ಮತ್ತಿತರ ದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಅತಿ ವೇಗದ ತೇಲುವ ರೈಲು ಮುಂಬೈ ಮತ್ತು ಫುಜೈರಾಹ್ ನಡುವೆ ಸಂಪರ್ಕ ಸಾಧಿಸಲು ಹಾಗೂ ದ್ವಿಪಕ್ಷೀಯ ವ್ಯಾಪಾರ ಅಭಿವೃದ್ಧಿಗಾಗಿ ರೂಪಿಸಲಾದ ಯೋಜನೆಯಾಗಿದೆ. ಇದರಂಗವಾಗಿ ಫುಜೈರಾಹ್ ಬಂದರಿನಿಂದ ಭಾರತಕ್ಕೆ  ತೈಲ ಸರಬರಾಜಾಗಲಿದ್ದರೆ,  ನರ್ಮದಾ ನದಿಯಿಂದ ಹೆಚ್ಚುವರಿ ನೀರು ನಮಗೆ ದೊರೆಯಲಿದೆ ಎಂದು ಕೈಗಾರಿಕಾ ಮತ್ತು ಉದ್ಯಮ ರಂಗದ ಗಣ್ಯರು ಭಾಗವಹಿಸಿದ್ದ ಸಬೆಯಲ್ಲಿ ಅವರು ತಿಳಿಸಿದರು.
ಮೊದಲು ಈ ಯೋಜನೆಯ ಸಾಧ್ಯತಾ ವರದಿ ತಯಾರಿಸಲಾಗುವುದೆಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News