‘ಒಪೆಕ್’ ಗುಂಪಿನಿಂದ ಕತರ್ ಹೊರಗೆ: ಇಂಧನ ಸಚಿವ ಸಅದ್ ಅಲ್-ಕಅಬಿ ಘೋಷಣೆ

Update: 2018-12-03 14:26 GMT

ದೋಹಾ (ಖತರ್), ಡಿ. 3: ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್)ಯಿಂದ ಕತರ್ ಜನವರಿಯಲ್ಲಿ ಹೊರಬರಲಿದೆ ಎಂದು ಇಂಧನ ಸಚಿವ ಸಅದ್ ಅಲ್-ಕಅಬಿ ಸೋಮವಾರ ಹೇಳಿದ್ದಾರೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸುವ ಹಾಗೂ ದೀರ್ಘಾವಧಿ ತಂತ್ರಗಾರಿಕೆಯನ್ನು ರೂಪಿಸುವ ತನ್ನ ಯೋಜನೆಯ ಭಾಗವಾಗಿ ಕತರ್ ಈ ನಿರ್ಧಾರಕ್ಕೆ ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ತಿಳಿಸಿದರು.

ಅದೇ ವೇಳೆ, ತಮ್ಮ ವ್ಯಾಪಾರ ಸಮರಕ್ಕೆ 90 ದಿನಗಳ ವಿರಾಮ ನೀಡಲು ಅಮೆರಿಕ ಮತ್ತು ಚೀನಾ ಒಪ್ಪಿಕೊಂಡ ಬಳಿಕ, ಸೋಮವಾರ ತೈಲ ಬೆಲೆ ಸುಮಾರು 5 ಶೇಕಡದಷ್ಟು ಹೆಚ್ಚಿದೆ.

ಒಪೆಕ್ ದೇಶಗಳು ಡಿಸೆಂಬರ್ 6ರಂದು ಸಭೆ ನಡೆಸಲಿವೆ. ಕುಸಿಯುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಿಸಲು, ಉತ್ಪಾದನೆಯನ್ನು ಕಡಿತ ಮಾಡುವ ನಿರ್ಧಾರವನ್ನು ಈ ಸಭೆಯಲ್ಲಿ ದೇಶಗಳು ತೆಗೆದುಕೊಳ್ಳುವುದೆಂದು ನಿರೀಕ್ಷಿಸಲಾಗಿದೆ.

ಉತ್ಪಾದನೆಯಲ್ಲಾದ ಹೆಚ್ಚಳದ ಹಿನ್ನೆಲೆಯಲ್ಲಿ, ಅಕ್ಟೋಬರ್‌ನಿಂದ ಕಚ್ಚಾತೈಲದ ಬೆಲೆ ಮೂರನೇ ಒಂದು ಭಾಗದಷ್ಟು ಇಳಿದಿರುವುದನ್ನು ಸ್ಮರಿಸಬಹುದಾಗಿದೆ.

ಉತ್ಪಾದನೆಯನ್ನು ಅಕ್ಟೋಬರ್‌ನಲ್ಲಿ ಇದ್ದ ಮಟ್ಟಕ್ಕಿಂತ ದಿನಕ್ಕೆ 10 ಲಕ್ಷದಿಂದ 14 ಲಕ್ಷ ಬ್ಯಾರಲ್‌ನಷ್ಟು ಕಡಿತ ಮಾಡಲು ಒಪೆಕ್ ದೇಶಗಳು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕತರ್‌ನ ತೈಲ ಉತ್ಪಾದನೆ ದಿನಕ್ಕೆ ಸುಮಾರು 6 ಲಕ್ಷ ಬ್ಯಾರಲ್ ಮಾತ್ರ. ಆದರೆ, ಅದು ಜಗತ್ತಿನ ಅತಿ ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ರಫ್ತುದಾರನಾಗಿದೆ.

ಅರಬ್ ಕೊಲ್ಲಿಯ ಸಣ್ಣ ದೇಶವಾಗಿರುವ ಕತರ್, ನೆರೆಯ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳೊಂದಿಗೆ ಘರ್ಷಣೆ ಹೊಂದಿದೆ. ಈ ದೇಶಗಳು ಕತರ್ ವಿರುದ್ಧ ಕಳೆದ ವರ್ಷ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News