ಕೊಲೆಗೀಡಾಗುವ ಮುನ್ನ ಸ್ನೇಹಿತನಿಗೆ 400ಕ್ಕೂ ಅಧಿಕ ಸಂದೇಶಗಳನ್ನು ಕಳುಹಿಸಿದ್ದ ಖಶೋಗಿ ಹೇಳಿದ್ದೇನು ?

Update: 2018-12-03 14:36 GMT

ವಾಶಿಂಗ್ಟನ್, ಡಿ. 3: ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಕೊಲೆಗೀಡಾಗುವ ಮೊದಲು, ಸೌದಿಯ ದೇಶಭ್ರಷ್ಟ ಪತ್ರಕರ್ತ ಜಮಾಲ್ ಖಶೋಗಿ ತನ್ನ ಸ್ನೇಹಿತರೊಬ್ಬರಿಗೆ 400ಕ್ಕೂ ಅಧಿಕ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಿದ್ದರು.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಓರ್ವ ‘ಮೃಗ’ ಹಾಗೂ ಬೆಂಬಲಿಗರು ಸೇರಿದಂತೆ ತನ್ನ ದಾರಿಯಲ್ಲಿ ಬರುವ ಎಲ್ಲರನ್ನೂ ಅವರು ಆಪೋಶನ ತೆಗೆದುಕೊಳ್ಳುತ್ತಾ ಸಾಗುತ್ತಾರೆ ಎಂಬುದಾಗಿ ಅವರು ತನ್ನ ಸಂದೇಶಗಳಲ್ಲಿ ಹೇಳಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಖಶೋಗಿ ತನ್ನ ಸಂದೇಶಗಳನ್ನು ಕೆನಡದ ಮಾಂಟ್ರಿಯಲ್‌ನಲ್ಲಿರುವ ಇನ್ನೋರ್ವ ಸೌದಿ ದೇಶಭ್ರಷ್ಟ ಉಮರ್ ಅಬ್ದುಲಝೀಝ್‌ರಿಗೆ ಕಳುಹಿಸಿದ್ದರು ಎಂದು ಸಿಎನ್‌ಎನ್ ಸೋಮವಾರ ವರದಿ ಮಾಡಿದೆ.

ಅವರು ಕಳುಹಿಸಿರುವ ಧ್ವನಿಮುದ್ರಿಕೆಗಳು, ಚಿತ್ರಗಳು ಮತ್ತು ವೀಡಿಯೊಗಳು ಇತರರ ಬಗ್ಗೆ ತಿರಸ್ಕಾರ ಧೋರಣೆ ಹೊಂದಿರುವ ವ್ಯಕ್ತಿಯೊಬ್ಬನ ಚಿತ್ರಣವನ್ನು ನೀಡುತ್ತದೆ.

 ‘‘ಹೆಚ್ಚೆಚ್ಚು ಜನರನ್ನು ತಿಂದಷ್ಟೂ ಹೆಚ್ಚೆಚ್ಚು ಜನರು ಅವರಿಗೆ ಬೇಕು’’ ಎಂಬುದಾಗಿ ಮೇ ತಿಂಗಳಲ್ಲಿ ಕಳುಹಿಸಿದ ಸಂದೇಶವೊಂದರಲ್ಲಿ ಖಶೋಗಿ ಹೇಳಿದ್ದರು. ಸೌದಿ ಪೊಲೀಸರು ಮಾನವಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿದ ಬಳಿಕ, ಅದಕ್ಕೆ ಪ್ರತಿಕ್ರಿಯೆಯಾಗಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News