ಉಮ್ರಾ ನಿಯಮ ಉಲ್ಲಂಘಿಸಿದರೆ ಜೈಲು, ದಂಡ: ಸೌದಿ ಘೋಷಣೆ

Update: 2018-12-04 14:40 GMT

ಜಿದ್ದಾ, ಡಿ. 4: ಉಮ್ರಾ ನಿಯಮಗಳನ್ನು ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯ ಎಚ್ಚರಿಸಿದೆ.

ಸೌದಿ ಅರೇಬಿಯದಲ್ಲಿ ಅವಧಿ ಮೀರಿ ವಾಸಿಸುವ ಉಮ್ರಾ ಯಾತ್ರಿಕರನ್ನು ಸಾಗಿಸುವ, ಅವರಿಗೆ ಉದ್ಯೋಗ, ಆಶ್ರಯ ನೀಡುವ ಹಾಗೂ ಅವರನ್ನು ಅಡಗಿಸಿಡುವವರು ಶಿಕ್ಷೆ ಎದುರಿಸುತ್ತಾರೆ ಎಂದು ಪಾಸ್‌ ಪೋರ್ಟ್ ಮಹಾನಿರ್ದೇಶನಾಲಯದಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಆಡಳಿತ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮುಹಮ್ಮದ್ ಬಿನ್ ಅಬ್ದುಲಝೀಝ್ ಅಲ್-ಸಆದ್ ಹೇಳಿದ್ದಾರೆ.

ಉಮ್ರಾ ಋತುವಿನ ಬಗ್ಗೆ ಪಾಸ್‌ಪೋರ್ಟ್ ಇಲಾಖೆ ಏರ್ಪಡಿಸಿರುವ ವಾರ್ಷಿಕ ಮಾಹಿತಿ ಅಭಿಯಾನದ ಉದ್ಘಾಟನೆಯ ವೇಳೆ ಈ ಎಚ್ಚರಿಕೆಯ ಘೋಷಣೆ ಮಾಡಲಾಗಿದೆ. ಹೊಸ ನಿಯಮಗಳು ಪ್ರಜೆಗಳಿಗೆ ಹಾಗೂ ವಿದೇಶಿಯರಿಗೂ ಅನ್ವಯಿಸುತ್ತದೆ.

ಉಮ್ರಾ ನಿಯಮಾವಳಿಗಳನ್ನು ಉಲ್ಲಂಘಿಸಿ ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ವಾಸಿಸುವ ವಿದೇಶಿಯರನ್ನು ಶಿಕ್ಷೆ ಅನುಭವಿಸಿ ದಂಡ ಪಾವತಿಸಿದ ಬಳಿಕ ಗಡಿಪಾರು ಮಾಡಲಾಗುವುದು ಎಂದು ಸಅದ್ ತಿಳಿಸಿದರು.

ಉಮ್ರಾ ನಿಯಮಾವಳಿ ಅರಿವು ಅಭಿಯಾನವು ಡಿಸೆಂಬರ್ 2ರಿಂದ 2019 ಜೂನ್ 18ರವರೆಗೆ ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News