×
Ad

ಕೊಲ್ಲಿಯಿಂದ ಭಾರತೀಯ ನಗರಗಳಿಗೆ ಹಾರುವ ಹಲವು ವಿಮಾನಗಳು ಬಂದ್

Update: 2018-12-05 20:54 IST

ದುಬೈ, ಡಿ. 5: ಕೊಲ್ಲಿ ವಲಯದಿಂದ ಕೇರಳದ ತಿರುವನಂತಪುರಂ ಮತ್ತು ಕೊಚ್ಚಿ ನಗರಗಳಿಗೆ ಹಾರುವ ನೇರ ವಿಮಾನಗಳ ದರದಲ್ಲಿ ಏರಿಕೆಯಾಗುವುದು ಖಚಿತವಾಗಿದೆ. ಇದು ಬೇಸಿಗೆಯಲ್ಲಿ ಕೊಲ್ಲಿ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಯೋಜನೆ ಹಾಕಿರುವ ಭಾರತೀಯ ಕುಟುಂಬಗಳಿಗೆ ಹೊರೆಯಾಗಿ ಪರಿಣಮಿಸಿದೆ.

ಭಾರತದ ನಗರಗಳಿಂದ ದೋಹಾ, ಮಸ್ಕತ್, ಅಬುಧಾಬಿ ಮತ್ತು ದುಬೈಗಳಿಗೆ ವಾರಕ್ಕೆ 39 ಹಾರಾಟ ನಡೆಸುತ್ತಿದ್ದ ಭಾರತದ ಎರಡು ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಯನ್ನು ನಿಲ್ಲಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಒಂದು ಕಾಲದಲ್ಲಿ ಕೊಲ್ಲಿಯು ಜೆಟ್ ಏರ್‌ವೇಸ್‌ನ ಪ್ರಮುಖ ಮಾರುಕಟ್ಟೆಯಾಗಿತ್ತು. ಈಗ ಕುಸಿಯುತ್ತಿರುವ ಬೇಡಿಕೆ ಹಾಗೂ ಹೆಚ್ಚುತ್ತಿರುವ ಸ್ಪರ್ಧೆಯನ್ನು ಅದು ಎದುರಿಸುತ್ತಿದೆ. ಅದರ ಪರಿಣಾಮವಾಗಿ ಅದು ಕೊಲ್ಲಿ ಸೇವೆಯನ್ನೇ ನಿಲ್ಲಿಸಿದೆ.

ಮಂಗಳೂರು-ಅಬುಧಾಬಿ, ಮಂಗಳೂರು-ದುಬೈ ಜೆಟ್ಟ್ ಏರ್ ವೇಸ್ ಯಾನ ಸ್ಥಗಿತ

‘‘ಕೊಚ್ಚಿ, ಕಲ್ಲಿಕೋಟೆ ಮತ್ತು ತಿರುವನಂತಪುರಂಗಳಿಂದ ದೋಹಾಕ್ಕೆ ಹೋಗುವ ವಿಮಾನಗಳು ಹಾಗೂ ಲಕ್ನೋ ಮತ್ತು ಮಂಗಳೂರುಗಳಿಂದ ಅಬುಧಾಬಿಗೆ ಹೋಗುವ ವಿಮಾನಗಳ ಸೇವೆಯನ್ನು ಜೆಟ್ ಏರ್‌ವೇಸ್ ನಿಲ್ಲಿಸಿದೆ. ಅದೂ ಅಲ್ಲದೆ, ಅದು ಮಂಗಳೂರು-ದುಬೈ ವಿಮಾನ ಸೇವೆಯನ್ನೂ ನಿಲ್ಲಿಸಿದೆ. ಡಿಸೆಂಬರ್ 5ರಿಂದ ಈ ಎಲ್ಲ ವಿಮಾನ ಯಾನಗಳು ಸ್ಥಗಿತಗೊಂಡಿವೆ’’ ಎಂದು ಮೂಲವೊಂದು ತಿಳಿಸಿದೆ.

ಒಮಾನ್‌ನಿಂದ ಮುಂಬೈ ಮತ್ತು ಹೊಸದಿಲ್ಲಿಗಳಿಗೆ ಹೋಗುವ ನೇರ ವಿಮಾನಗಳನ್ನೂ ಜೆಟ್ ಏರ್‌ವೇಸ್ ನಿಲ್ಲಿಸುವ ಸಾಧ್ಯತೆಯಿದೆ.

ಬಜೆಟ್ ವಾಯುಯಾನ ಸಂಸ್ಥೆ ಇಂಡಿಗೊ ಕೂಡ ಮಸ್ಕತ್‌ನಿಂದ ಕಲ್ಲಿಕೋಟೆ ಮತ್ತು ಚೆನ್ನೈಗೆ ಹೋಗುವ ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಂಡಿಗೋ ಈಗ ಮುಂಬೈ, ಕೊಚ್ಚಿ ಮತ್ತು ಅಹ್ಮದಾಬಾದ್‌ಗಳಿಗೆ ಹೋಗುವ ವಿಮಾನಗಳ ಹಾರಾಟವನ್ನು ಮಾತ್ರ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News