ಮಕ್ಕಳ ಪಾಲಿಗೆ ದುಬಾರಿಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈ ಪ್ರಯಾಣ

Update: 2018-12-06 18:19 GMT

ದುಬೈ, ಡಿ. 6: ದುಬೈಯ ವಿಮಾನ ನಿಲ್ದಾಣಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಅಪ್ರಾಪ್ತ ವಯಸ್ಕರ ಜೊತೆಯಲ್ಲಿ ಹಿರಿಯರು ಇಲ್ಲದಿದ್ದಲ್ಲಿ ಅಂಥ ಮಕ್ಕಳಿಗಾಗಿ ಏರ್ ಇಂಡಿಯ ಎಕ್ಸ್‌ಪ್ರೆಸ್ ಹೊಸ ನಿಯಮಗಳನ್ನು ರೂಪಿಸಿದೆ ಹಾಗೂ ಟಿಕೆಟ್ ಮೊತ್ತಕ್ಕೆ ಹೆಚ್ಚುವರಿಯಾಗಿ ವೆಚ್ಚವನ್ನು ಪಡೆಯುತ್ತದೆ.

ವಿಮಾನದಲ್ಲಿ ಮಕ್ಕಳ ಜೊತೆಗೆ ಹಿರಿಯರು ಇಲ್ಲದಿದ್ದರೆ, ಹೆತ್ತವರು ಪ್ರತಿ ಮಗುವಿಗೆ ಒಮ್ಮುಖ ಪ್ರಯಾಣಕ್ಕೆ ಹೆಚ್ಚುವರಿಯಾಗಿ 165 ದಿರ್ಹಮ್ (ಸುಮಾರು 3,180 ರೂಪಾಯಿ) ಪಾವತಿಸಬೇಕಾಗುತ್ತದೆ. ಹೋಗಿ ಬರುವ ಪ್ರಯಾಣಕ್ಕೆ 300 ದಿರ್ಹಮ್ (5786 ರೂಪಾಯಿ) ಪಾವತಿಸಬೇಕು.

ಹಿರಿಯರು ಜೊತೆಗಿಲ್ಲದ ಮಕ್ಕಳನ್ನು ನಿಭಾಯಿಸಲು ಹೆಚ್ಚುವರಿ ವೆಚ್ಚ ಪಡೆಯಲು ದುಬೈ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆ ನಿರ್ಧರಿಸಿದ ಬಳಿಕ, ಏರ್ ಇಂಡಿಯ ಎಕ್ಸ್‌ಪ್ರೆಸ್ ಹೊಸ ವೆಚ್ಚವನ್ನು ವಿಧಿಸಲು ಮುಂದಾಗಿದೆ.

ಹೊಸ ದರವನ್ನು ಸೋಮವಾರ ಘೋಷಿಸಲಾಗಿದೆ ಹಾಗೂ ಅದು ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಯುಎಇಯಲ್ಲಿರುವ ಟ್ರಾವೆಲ್ ಏಜಂಟ್‌ಗಳಿಗೆ ಏರ್ ಇಂಡಿಯ ಎಕ್ಸ್‌ಪ್ರೆಸ್ ಕಳುಹಿಸಿರುವ ಸುತ್ತೋಲೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News