ಎರಡನೇ ಹಂತದ ರೇಸ್ ಗಳಲ್ಲೂ ಮೂಡುಬಿದಿರೆ ಮೂಲದ ಅಬ್ದುಲ್ ಸಮೀ ಪ್ರಥಮ

Update: 2018-12-10 15:29 GMT
ಅಬ್ದುಲ್ ಸಮೀ (ಫೈಲ್ ಚಿತ್ರ)

ಬಹರೈನ್, ಡಿ. 10 : ಇಲ್ಲಿನ ಬಹರೈನ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ನಲ್ಲಿ  ಡಿಸೆಂಬರ್ 7 ರಂದು ನಡೆದ ಪ್ರತಿಷ್ಠಿತ ಬಹರೈನ್ ಸೂಪರ್ ಸ್ಪೋರ್ಟ್ ಚಾಂಪಿಯನ್ ಶಿಪ್ ಸೂಪರ್ ಸ್ಪೋರ್ಟ್ ಬೈಕ್ ರೇಸ್ ಎರಡನೇ  ಹಂತದ ಮೊದಲ ಹಾಗು ಎರಡನೇ ರೇಸ್ ಗಳಲ್ಲಿ ಅಬ್ದುಲ್ ಸಮೀ ಸಯ್ಯದ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದರೊಂದಿಗೆ ಈ ಚಾಂಪಿಯನ್ ಶಿಪ್ ನ ಸತತ ನಾಲ್ಕು ರೇಸ್ ಗಳಲ್ಲಿ ಸಮೀ ಮೊದಲ ಸ್ಥಾನ ಪಡೆದು ಅತ್ಯುತ್ತಮ ನಿರ್ವಹಣೆ ತೋರಿಸಿದ್ದಾರೆ. 

ಇವರು ಮೂಡುಬಿದಿರೆ ಮೂಲದ ದುಬೈಯ ಯುವ ಉದ್ಯಮಿ ಹಾಗು ಸ್ವತಃ ಬೈಕ್ ರೇಸ್ ಚಾಂಪಿಯನ್ ಸಯ್ಯದ್ ನಾಸಿರ್ ಅವರ ಸುಪುತ್ರ. ಈಗ ಅಮೆರಿಕನ್ ಯುನಿವರ್ಸಿಟಿ ಆಫ್ ಶಾರ್ಜಾದಲ್ಲಿ  ಆರ್ಥಿಕ ಆಡಳಿತ ವಿಷಯದಲ್ಲಿ ಪ್ರಥಮ ವರ್ಷದ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಅತ್ಯಂತ ಕಿರಿಯ ಸ್ಪರ್ಧಿ ಸಮೀ ಎಂಬುದೂ ಗಮನಾರ್ಹ.

ಎಪ್ರಿಲಿಯ 125 ಸಿಸಿ ಬೈಕ್ ಚಲಾಯಿಸಿದ 18ರ ಹರೆಯದ ಅಬ್ದುಲ್ ಸಮೀ ಒಟ್ಟು 6 ಹಂತಗಳಲ್ಲಿ  ಹನ್ನೆರಡು ರೇಸ್ ಗಳಲ್ಲಿ ಸ್ಪರ್ಧಿಸಬೇಕಿದ್ದು ಈ ಪೈಕಿ ಮೊದಲ ನಾಲ್ಕು ರೇಸ್ ಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ಮುಂದಿನ ರೇಸ್ ಜನವರಿ 11 ಕ್ಕೆ ನಡೆಯಲಿದೆ. ಕೊನೆಯ ಹಾಗು ಆರನೇ ಹಂತ ಏಪ್ರಿಲ್ ನಲ್ಲಿ ನಡೆಯಲಿದೆ. ಒಟ್ಟು ಒಂಬತ್ತು ದೇಶಗಳ ಸ್ಪರ್ಧಿಗಳು ಚಾಂಪಿಯನ್ ಶಿಪ್ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News