ಐಎಸ್ಎಫ್: ಬಾಬರಿ ಮಸ್ಜಿದ್ ಪುನರ್ ನಿರ್ಮಿಸುವ ಕುರಿತು ಜನಜಾಗೃತಿ
ಸಾಲ್ಮಿಯಾ, ಡಿ. 16: ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ (ಐಎಸ್ಎಫ್) ಕರ್ನಾಟಕ ಚಾಪ್ಟರ್ ಇದರ ವತಿಯಿಂದ ಬಾಬರಿ ಮಸ್ಜಿದ್ ನೆನಪಿಗಾಗಿ “ಬಾಬರಿ ಮರಳಿ ಪಡೆಯಿರಿ ಭಾರತ ಮರಳಿ ಪಡೆಯಿರಿ” ಎಂಬ ಸಾರ್ವಜನಿಕ ಕಾರ್ಯಕ್ರಮ ಸಾಲ್ಮಿಯಾ ಹಾರ್ಮೊನಿ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಕಲ್ಲಡ್ಕ ಅವರು “ಬಾಬ್ರಿ ಮಸೀದಿ ದ್ವಂಸ ಪ್ರಕರಣವು ಭಾರತದ ಸಂವಿಧಾನ ಕೊಡಮಾಡಿದ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. ಈ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವಾದವರೆಲ್ಲಾ ಯಾವುದೇ ರೀತಿಯ ಕಾನೂನು ಕ್ರಮಗಳಿಗೊಳಗಾಗದೆ ಆರಾಮವಾಗಿ ವಿಹರಿಸುತ್ತಿದ್ದಾರೆ. ಈ ಬಗ್ಗೆ ಸರಕಾರವನ್ನು ಎಚ್ಚರಿಸಬೇಕಾದ ಮುಸ್ಲಿಮರು ಮತ್ತು ಜಾತ್ಯಾತೀತ ಮಂದಿ ದುರದೃಷ್ಟವಶಾತ್ ಇಂದು ನಿರ್ಲಕ್ಷದಿಂದ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸಮಾಜದಲ್ಲಿ ಪ್ರಜ್ಞಾವಂತಿಕೆ ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ” ಎಂದರು.
ವಿವಿಧ ಜಾತಿ ಧರ್ಮಗಳ ಜನರು ಪರಸ್ಪರ ವಿಶ್ವಾಸ ನಂಬಿಕೆಯಿಂದ ಅನ್ಯೋನ್ಯವಾಗಿರುವಾಗ ಭಾರತದ ಸೌಹಾರ್ದ ವಾತಾವರಣವನ್ನು ನಾಶಗೊಳಿಸಿ ಪರಸ್ಪರ ಅಪನಂಬಿಕೆಯಿಂದ ಕಳೆಯುವಂತಾಗಲು ಬಿಜೆಪಿ ನೇತೃತ್ವದಲ್ಲಿ ಸಂಘಪರಿವಾರ ನಡೆಸಿದ ಹುನ್ನಾರವಾಗಿದೆ. ಬಾಬ್ರಿ ಮಸ್ಜಿದ್ ಮರು ನಿರ್ಮಾಣಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಆ ಮೂಲಕ ಇಲ್ಲಿನ ಸಂವಿಧಾನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಬಾಬರೀ ಮಸ್ಜಿದನ್ನು ಕಳೆದುಕೊಂಡ ಮುಸ್ಲಿಮರು ಕಾನೂನಿನ ಮೇಲೆ ನಂಬಿಕೆಯಿಟ್ಟು, ಕಳೆದ ಕಾಲು ಶತಮಾನದಿಂದ ನ್ಯಾಯಮಂದಿರದ ಮುಂದೆ ನಿಂತಿದ್ದಾರೆ. ಆದರೆ ಬಾಬ್ರಿ ಮಸ್ಜಿದನ್ನು ದ್ವಂಸಗೊಳಿಸಿದ ಸಂಘಪರಿವಾರದ ಅದೇ ಶಕ್ತಿಗಳು ಇದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ನ್ಯಾಯಾಂಗ ವ್ಯವಸ್ಥೆಗೆ ಸವಾಲೆಸೆಯುವ ರೀತಿಯಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಬೆದರಿಕೆಯೊಡ್ಡುತ್ತಿರುವುದು ದುರದೃಷ್ಟಕರ ಮತ್ತು ಆಡಳಿತ ವ್ಯವಸ್ಥೆಯು ಅದಕ್ಕೆ ನೀಡುತ್ತಿರುವ ಮೌನ ಸಮ್ಮತಿಯು ಅಪಾಯಕಾರಿ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುವೈಟ್ ಮಣಿಪುರ ಅಸೋಸಿಯೇಷನ್ ಗೌರವಾಧ್ಯಕ್ಷ ಸಯ್ಯದ್ ಬ್ಯಾರಿ , ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಕರ್ನಾಟಕ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮತ್ತು ಕುವೈಟ್ ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ವಲಯ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬಡ್ಡೂರ್ ಸಭಿಕರುನ್ನುದ್ದೇಶಿಸಿ ಮಾತನಾಡಿದರು.
ಐಎಸ್ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ರಫೀಕ್ ಮಂಚಿ ಸ್ವಾಗತಿಸಿದರು, ಆಸೀಫ್ ಕಾಪು ವಂದಿಸಿದರು. ಇಮ್ತಿಯಾಝ್ ಅಹ್ಮದ್ ಅರ್ಕುಳ ಕಾರ್ಯಕ್ರಮ ನಿರೂಪಿಸಿದರು.