2022ರ ವಿಶ್ವಕಪ್ ಫುಟ್‍ ಬಾಲ್ ಕ್ರೀಡಾಂಗಣ ವಿನ್ಯಾಸ ಅನಾವರಣಗೊಳಿಸಿದ ಕತರ್

Update: 2018-12-16 16:23 GMT

ಕತರ್, ಡಿ.16: 2022ರ ವಿಶ್ವಕಪ್ ಫುಟ್‍ ಬಾಲ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ಕ್ರೀಡಾಂಗಣದ ವಿನ್ಯಾಸವನ್ನು ಕತರ್ ಅನಾವರಣಗೊಳಿಸಿದೆ. ಕ್ರೀಡಾಂಗಣ ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಮಧ್ಯಪ್ರಾಚ್ಯ ದೇಶವೊಂದರಲ್ಲಿ ವಿಶ್ವಕಪ್ ಫುಟ್‍ ಬಾಲ್ ಫೈನಲ್ ನಡೆಯುತ್ತಿರುವುದು ಇದೇ ಮೊದಲು.

ದೇಶದ ರಾಜ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೇರಿದಂತೆ ಇತರ ಗಣ್ಯರು 80 ಸಾವಿರ ಆಸನ ಸೌಲಭ್ಯವಿರುವ ಲುಸೈಲ್ ಕ್ರೀಡಾಂಗಣದ ವಿನ್ಯಾಸ ಅನಾವರಣಗೊಳಿಸಿದರು. ವಿಶ್ವಕಪ್ ಸಂಘಟನಾ ಸಮಿತಿಯ ಮುಖ್ಯಸ್ಥ ಹಸನ್ ಅಲ್ ಥಾವಡಿ ಈ ಅನಾವರಣ ಸಮಾರಂಭವನ್ನು ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ. ನಮ್ಮ ಪಾಲಿಗೆ ಪ್ರತಿ ಮೈಲುಗಲ್ಲು ಕೂಡ ಮಹತ್ವದ್ದು ಎಂದು ಅವರು ಹೇಳಿದರು.

ವಿಶ್ವಕಪ್‍ ಗಾಗಿ ಕತರ್ ಅಭಿವೃದ್ಧಿಪಡಿಸುತ್ತಿರುವ ಎಂಟು ಸ್ಟೇಡಿಯಂಗಳ ಪೈಕಿ ಲುಸೈಲ್ ಸ್ಟೇಡಿಯಂ ಕೊನೆಯದ್ದು. ಬ್ರಿಟಿಷ್ ವಾಸ್ತುಶಿಲ್ಪ ಸಂಸ್ಥೆ ‘ಫೋಸ್ಟರ್ ಆ್ಯಂಡ್ ಪಾರ್ಟ್‍ನರ್ಸ್’ ಈ ಕ್ರೀಡಾಂಗಣದ ವಿನ್ಯಾಸ ಸಿದ್ಧಪಡಿಸಿದ್ದು, ಅರಬ್ ಕೌಶಲವನ್ನು ರೂಢಿಸಿಕೊಂಡು ಇದನ್ನು ನಿರ್ಮಿಸಲಾಗುತ್ತಿದೆ.

ಕತರ್ ಸಂಸ್ಥಾಪಕ ಶೇಖ್ ಜಾಸಿಮ್ ಬಿನ್ ಮುಹಮ್ಮದ್ ಬಿನ್ ಥಾನಿ ಅಲ್ ಥಾನಿಯವರ ಹಳೆಯ ನಿವಾಸಕ್ಕೆ ಹೊಂದಿಕೊಂಡಂತೆ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಹೊಚ್ಚಹೊಸ ಲುಸೈಲ್ ನಗರದಲ್ಲಿ ಈ ಕ್ರೀಡಾಂಗಣ 45 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ರಾಜಧಾನಿ ದೋಹಾದಿಂದ 15 ಕಿಲೋಮೀಟರ್ ದೂರದಲ್ಲಿರುತ್ತದೆ.

ಇದು ಕತರ್ ಕೈಗೊಂಡಿರುವ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದ್ದು, ವಿಶ್ವಕಪ್ ಹಿನ್ನೆಲೆಯಲ್ಲಿ ಇಡೀ ದೇಶ ಸಂಪೂರ್ಣ ನವೀಕರಣಗೊಳ್ಳುತ್ತಿದೆ. ಕ್ರೀಡಾಂಗಣ ನಿರ್ಮಾಣ ಕಾರ್ಯ 2020ಕ್ಕೆ ಪೂರ್ಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News