ಸೌದಿ: ಆಡಳಿತದಲ್ಲಿ ಭಾರೀ ಬದಲಾವಣೆ ಮಾಡಿದ ದೊರೆ

Update: 2018-12-28 15:09 GMT

ರಿಯಾದ್, ಡಿ. 28: ಸೌದಿ ಅರೇಬಿಯ ದೊರೆ ಸಲ್ಮಾನ್ ಗುರುವಾರ ಆಡಳಿತದಲ್ಲಿ ಭಾರೀ ಬದಲಾವಣೆಗಳನ್ನು ಮಾಡಿದ್ದಾರೆ. ವಿದೇಶ, ರಾಷ್ಟ್ರೀಯ ಭದ್ರತೆ, ವಾರ್ತಾ ಮತ್ತು ಶಿಕ್ಷಣ ಸಚಿವರನ್ನು ಬದಲಿಸಿದ್ದಾರೆ.

ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯಿಂದ ಎದ್ದ ಅಂತಾರಾಷ್ಟ್ರೀಯ ಆಕ್ರೋಶದ ಫಲಶ್ರುತಿಯಾಗಿ ಅದು ಈ ಬದಲಾವಣೆಗಳನ್ನು ಮಾಡಿದೆ ಎನ್ನಲಾಗಿದೆ.

ಆದರೆ, ಖಶೋಗಿ ಹತ್ಯೆಗೆ ಆದೇಶ ನೀಡಿದವರು ಎನ್ನುವ ಆರೋಪವನ್ನು ಹೊತ್ತಿರುವ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ದೈನಂದಿನ ಆಡಳಿತವನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.

ವಿದೇಶ ಸಚಿವ ಆದಿಲ್ ಅಲ್-ಜುಬೈರ್ ಸ್ಥಾನದಲ್ಲಿ ಮಾಜಿ ಹಣಕಾಸು ಸಚಿವ ಇಬ್ರಾಹೀಮ್ ಅಲ್-ಅಸಾಫ್‌ರನ್ನು ನೇಮಿಸಲಾಗಿದೆ. ಇಬ್ರಾಹೀಮ್‌ರನ್ನು ಕಳೆದ ವರ್ಷದ ಭ್ರಷ್ಟಾಚಾರ ನಿಗ್ರಹ ದಾಳಿಯ ವೇಳೆ ಬಂಧಿಸಲಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಖಶೋಗಿ ಹತ್ಯೆಯ ಬಳಿಕ, ಕಳಂಕಿತ ಸೌದಿ ಸರಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದ ವಿದೇಶ ಸಚಿವ ಜುಬೈರ್‌ಗೆ ಹಿಂಬಡ್ತಿ ನೀಡಲಾಗಿದೆ. ಅವರು ವಿದೇಶ ಸಚಿವಾಲಯದಲ್ಲೇ ಸಹಾಯಕ ಸಚಿವರಾಗಿರುತ್ತಾರೆ.

ಯುವರಾಜರಿಗೆ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಲು ಸಚಿವ ಸಂಪುಟ ಪುನಾರಚನೆಯು ಸಹಾಯ ಮಾಡಿಕೊಟ್ಟಿದೆ ಎಂದು ‘ದಿ ಅರೇಬಿಯ ಫೌಂಡೇಶನ್’ ಮುಖ್ಯಸ್ಥ ಅಲಿ ಶಿಹಾಬಿ ಹೇಳಿದ್ದಾರೆ. ಭಡ್ತಿ ಪಡೆದ ಹೆಚ್ಚಿನವರು ಅವರ ಬೆಂಬಲಿಗರು ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News