ಸುವರ್ಣಮಹೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಕೇರಳ ನೆರೆಸಂತ್ರಸ್ತರಿಗೆ ನೀಡಿದ ದುಬೈನ ಚರ್ಚ್

Update: 2018-12-29 17:17 GMT

ದುಬೈ,ಡಿ.29: ಸದ್ಭಾವನೆಯ ಕ್ರಮವಾಗಿ, ದುಬೈಯ ಚರ್ಚೊಂದು ತನ್ನ ಸುವರ್ಣ ಮಹೋತ್ಸವ ಆಚರಣೆಯನ್ನು ಕೈಬಿಟ್ಟು, ಅದಕ್ಕೆ ಮೀಸಲಿಟ್ಟ ಹಣವನ್ನು ಕೇರಳ ನೆರೆಸಂತ್ರಸ್ತರಿಗೆ ದೇಣಿಗೆಯಾಗಿ ನೀಡಿದೆ. ಯುಎಇನ ಸೈಂಟ್ ಥಾಮಸ್ ಒರ್ಥೊಡಕ್ಸ್ ಕ್ಯೆಥೆಡ್ರಲ್ ತನ್ನ ಸ್ಥಾಪನೆಯ 50 ವರ್ಷದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ ವರ್ಷವಿಡೀ ನಡೆಯಲಿದ್ದ ಈ ಸಂಭ್ರಮಾಚರಣೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರದ್ದುಪಡಿಸಿ, ಅದರಲ್ಲಿ ಉಳಿತಾಯವಾಗುವ ಹಣವನ್ನು ಕೇರಳ ನೆರೆಸಂತ್ರಸ್ತರಿಗೆ ನೀಡಲು ಅದು ನಿರ್ಧರಿಸಿದೆ. ಕಳೆದ ನೂರು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಸೈಂಟ್ ಥಾಮಸ್ ಓರ್ಥೊಡಕ್ಸ್ ಚರ್ಚ್ 5,42,643 ದಿರ್ಹಂಗಳನ್ನು ದೇಣಿಗೆಯಾಗಿ ನೀಡಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ದುಬೈಯಲ್ಲಿರುವ ಈ ಚರ್ಚ್‌ನ ಅನುಯಾಯಿಗಳಲ್ಲಿ ಬಹುತೇಕ ಮಂದಿ ಕೇರಳೀಯರು. ಈ ವರ್ಷದ ಆರಂಭದಲ್ಲಿ ಚರ್ಚ್‌ನ ಆಡಳಿತವು ಕೇರಳದ ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿಕೋಪ ಪರಿಹಾರ ನಿಧಿಗೆ 2 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿತ್ತು. ಒಟ್ಟಾರೆಯಾಗಿ ಕೇರಳ ನೆರೆಪರಿಹಾರ ನಿಧಿಗೆ 10 ದಶಲಕ್ಷ ಡಾಲರ್‌ಗಳನ್ನು ವ್ಯಯಿಸಿರುವುದಾಗಿ ವಿಕಾರ್ ಫಾದರ್ ನಿನಾನ್ ಫಿಲಿಪ್ ಪನಕ್ಕಮಟ್ಟಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News