ಫೋರ್ಬ್ಸ್ ಯುಎಇಯ ಅಗ್ರ 50 ಖಾಸಗಿ ಕಂಪೆನಿಗಳ ಪಟ್ಟಿಯಲ್ಲಿ ತುಂಬೆ ಗ್ರೂಪ್‌ಗೆ ಸ್ಥಾನ

Update: 2018-12-31 15:17 GMT
ಡಾ.ತುಂಬೆ ಮೊಯಿದಿನ್

ದುಬೈ, ಡಿ. 31: ಫೋರ್ಬ್ಸ್ ಮಧ್ಯಪ್ರಾಚ್ಯ ಹೊರತಂದಿರುವ ಯುಎಇಯ ಅಗ್ರ 50 ಖಾಸಗಿ ಕಂಪೆನಿಗಳ ಪಟ್ಟಿಯಲ್ಲಿ ದುಬೈ ಮೂಲದ ಜಾಗತಿಕ ಉದ್ಯಮ ಸಮೂಹ ತುಂಬೆ ಗ್ರೂಪ್ ಸ್ಥಾನ ಪಡೆದುಕೊಂಡಿದೆ.

ಕಂಪೆನಿಯಲ್ಲಿರುವ ಉದ್ಯೋಗಿಗಳು, ಕಾರ್ಯಾಚರಿಸುತ್ತಿರುವ ದೇಶಗಳ ಸಂಖ್ಯೆ, ಉದ್ಯಮದ ರೀತಿ ಮತ್ತು ಕಾರ್ಯಾಚರಣೆಯ ಕ್ಷೇತ್ರಗಳ ಸಂಖ್ಯೆ ಜೊತೆಗೆ ಕಂಪೆನಿಯ ಆಯಸ್ಸನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಸದ್ಯ ಬಿಡುಗಡೆ ಮಾಡಲಾಗಿರುವ ಪಟ್ಟಿಯು ಯುಎಇಯನ್ನು ಒಂದು ವ್ಯವಹಾರ ಕೇಂದ್ರವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕಂಪೆನಿಗಳನ್ನು ಗುರುತಿಸುವ ಫೋರ್ಬ್ಸ್ ಮಧ್ಯಪ್ರಾಚ್ಯದ ಮೊದಲ ಯುಎಇ ಅಗ್ರ 100 ರ್ಯಾಂಕಿಂಗ್ ಪಟ್ಟಿಯ ಭಾಗವಾಗಿದೆ.

ಈ ಪಟ್ಟಿಯಲ್ಲಿ ತುಂಬೆ ಸಮೂಹ 29ನೇ ಸ್ಥಾನವನ್ನು ಪಡೆದುಕೊಂಡಿದೆ. ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯಿದಿನ್ ಅವರು, ಈ ಮನ್ನಣೆ ಕಂಪೆನಿಯ ಸ್ಥಿರ ಬೆಳವಣಿಗೆ ಮತ್ತು ವೈವಿಧ್ಯತೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದಾರೆ.

ತುಂಬೆ ಸಮೂಹವು ತನ್ನ ಕಾರ್ಯತಂತ್ರದ ಪ್ರಕಾರ, 2023ರ ವೇಳೆಗೆ ತನ್ನ ವ್ಯವಹಾರವನ್ನು ಕನಿಷ್ಟ ಹತ್ತು ಪಟ್ಟು ಹೆಚ್ಚುಗೊಳಿಸುವ, ಜಾಗತಿಕ ಅಸ್ತಿತ್ವವನ್ನು ಬಲಪಡಿಸುವ ಮತ್ತು ಉದ್ಯೋಗಿಗಳ ಸಂಖ್ಯೆಯನ್ನು 25,000ಕ್ಕೆ ಹೆಚ್ಚಿಸುವ ಉದ್ದೇಶದಿಂದ ಬೆಳವಣಿಗೆಯ ಹೊಸ ಶಕೆ ಮತ್ತು ಜಾಗತಿಕ ವಿಸ್ತರಣೆಯ ಹಾದಿಯಲ್ಲಿರುವ ಸಮಯದಲ್ಲೇ ಈ ಮನ್ನಣೆ ದೊರಕಿದೆ. ಆಸಕ್ತಿದಾಯಕ ವಿಷಯವೆಂದರೆ, 2018 ತುಂಬೆ ಸಮೂಹ 20 ವರ್ಷ ಪೂರೈದಸಿದ ವರ್ಷವೂ ಆಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News