ರಾಹುಲ್ ಗಾಂಧಿ ದುಬೈ ಪ್ರವಾಸಕ್ಕೆ ಭರದ ಸಿದ್ಧತೆ: ಡಾ.ಆರತಿ ಕೃಷ್ಣ

Update: 2019-01-06 12:05 GMT

ದುಬೈ, ಜ. 6 : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನವರಿ 11ರಂದು ಸುಮಾರು 40,000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾತನಾಡಲಿದ್ದಾರೆ, ರಾಹುಲ್ ಗಾಂಧಿಯವರ ಯುಎಇ ಪ್ರವಾಸಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಅನಿವಾಸಿ ಭಾರತೀಯರು ರಾಹುಲ್ ಗಾಂಧಿಯನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ ಎಂದು ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವ ವಹಿಸಿರುವ ಕೆಪಿಸಿಸಿ ಎನ್ಆರ್ ಐ ಸೆಲ್ ಅಧ್ಯಕ್ಷೆ ಹಾಗೂ ಐಂಡಿಯನ್ ಓವರ್ಸೀಸ್ ಕಾಂಗ್ರೆಸ್ ಕಾರ್ಯದರ್ಶಿ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ.

ಜ.11 ಮತ್ತು 12ರಂದು ಯುಎಇ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮೊದಲ ದಿನ ಅನಿವಾಸಿ ಭಾರತೀಯ ಕಾರ್ಮಿಕರ ಜೀವನ ಕ್ರಮವನ್ನು ವೀಕ್ಷಿಸಿ, ಅವರೊಂದಿಗೆ ಲೇಬರ್ ಕ್ಯಾಂಪಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಲಿದ್ದು, ನಂತರ ದುಬೈನಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಚರ್ಚಾ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸಂಜೆ 4:30ಕ್ಕೆ ದುಬೈ ಅಂತರ್ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೇರಲಿರುವ ಸುಮಾರು 40,000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಡಾ. ಆರತಿ ಕೃಷ್ಣ ವಿವರಿಸಿದರು.

ಜ.12ರಂದು ರಾಹುಲ್ ಗಾಂಧಿ ಅವರು ಅಬುಧಾಬಿಯ ಶೇಕ್ ಝಾಹಿದ್ ಮಸೀದಿಗೆ ಭೇಟಿ ನೀಡಲಿದ್ದು, ಅಲ್ಲದೇ ಅಬುಧಾಬಿಯಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಚರ್ಚಾವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ನಂತರ ದೆಹಲಿಗೆ ವಾಪಾಸಾಗಲಿದ್ದಾರೆ. ರಾಹುಲ್ ಗಾಂಧಿಯವರ ಯುಎಇ ಪ್ರವಾಸಕ್ಕೆ ಕಳೆದ ಒಂದು ವರ್ಷದಿಂದ ಅನಿವಾಸಿ ಭಾರತೀಯರಿಂದ ಬಹಳಷ್ಟು ಒತ್ತಾಯ, ಬೇಡಿಕೆ ಬಂದಿದ್ದು ಆದರೆ ರಾಹುಲ್ ಗಾಂಧಿಯ ಬಿಡುವಿಲ್ಲದ ಕಾರ್ಯಕ್ರಮ, ಚುನಾವಣಾ ಪ್ರಚಾರ ಹಾಗೂ ಸಂಸತ್ ಅಧಿವೇಶನದಿಂದಾಗಿ ಸಮಯ ಕೂಡಿ ಬಂದಿರಲಿಲ್ಲ. ಆದರೆ ಇದೀಗ ಆ ಐತಿಹಾಸಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಡಾ.ಆರತಿ ಕೃಷ್ಣ  ಉತ್ತರಿಸಿದರು.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಪಾಲ್ಗೊಳ್ಳಲು ಇಚ್ಚಿಸುವವರು ಒನ್ಲೈನ್ ರೆಜಿಸ್ಟ್ರೇಷನ್ ಮಾಡಲೇಬೇಕೆಂದು ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಉಚಿತ ತಿಂಡಿ, ಪಾನೀಯ ಹಾಗೂ ಊಟದ ವ್ಯವಸ್ಥೆಯೂ ಇದೆ ಎಂದು ಮಾಹಿತಿ ನೀಡಿದರು.

ರಾಹುಲ್ ಗಾಂಧಿಯವರ ದುಬೈ ಕ್ರಿಕೆಟ್ ಸ್ಟೇಡಿಯಂನ ಕಾರ್ಯಕ್ರಮದ ಕುರಿತು ಮತ್ತು ಉಚಿತ ಬಸ್ಸಿನ ವ್ಯವಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಸಲು 0554635751, 0556645631, 0506459054, 0508074646. ಸಂಖ್ಯೆಗೆ ಕರೆ ಮಾಡಲು ಕರ್ನಾಟ ಮೀಡಿಯಾ ಫೋರಂ ಯುಎಇ ಸೂಚಿಸಲಾಗಿದೆ.

ಡಾ. ಆರತಿ ಕೃಷ್ಣ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News