ಸೌದಿ: ವಿವಾಹ ವಿಚ್ಛೇದನವಾದರೆ ಇನ್ನು ಮಹಿಳೆಯರಿಗೆ ಮಾಹಿತಿ

Update: 2019-01-07 16:51 GMT

ರಿಯಾದ್, ಜ. 7: ಸೌದಿ ಅರೇಬಿಯದಲ್ಲಿ ಮಹಿಳೆಯರ ಅರಿವಿಗೇ ಬಾರದೆ ಅವರ ವಿವಾಹ ಕೊನೆಗೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೂಪಿಸಲಾದ ನೂತನ ಕಾನೂನಿನನ್ವಯ, ಗಂಡಂದಿರು ವಿವಾಹ ವಿಚ್ಛೇದನ ನೀಡಿದರೆ ಮಹಿಳೆಯರಿಗೆ ಟೆಕ್ಸ್ಟ್ ಸಂದೇಶ ಮೂಲಕ ಮಾಹಿತಿ ನೀಡಲಾಗುತ್ತದೆ.

ಗುಪ್ತ ವಿಚ್ಚೇದನಗಳನ್ನು ಕೊನೆಗೊಳಿಸುವ ಹಾಗೂ ತಮ್ಮ ವೈವಾಹಿಕ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಮಹಿಳೆಯರಿಗೆ ಇರುವಂತೆ ಖಚಿತ ಪಡಿಸುವ ನಿಟ್ಟಿನಲ್ಲಿ ರೂಪಿಸಲಾದ ಕಾನೂನು ರವಿವಾರ ಜಾರಿಗೆ ಬಂದಿದೆ. ಈ ಕಾನೂನಿನ ಮೂಲಕ ಮಹಿಳೆಯರು ಜೀವನಾಂಶ ಮುಂತಾದ ತಮ್ಮ ಹಕ್ಕುಗಳಿಗಾಗಿ ಹೋರಾಡಬಹುದಾಗಿದೆ.

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸುಧಾರಣೆಗಳ ಭಾಗವಾಗಿ ಈ ಕಾನೂನು ಜಾರಿಗೆ ಬಂದಿದೆ. ಸೌದಿ ಅರೇಬಿಯದಲ್ಲಿ ಮಹಿಳೆಯರ ವಾಹನ ಚಾಲನೆ ಮೇಲಿದ್ದ ನಿಷೇಧ ಈಗಾಗಲೇ ತೆರವುಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಇಂಥ ವಿಚ್ಛೇದನ ಅಧಿಸೂಚನೆಗಳನ್ನು ಕಳುಹಿಸುವ ಪ್ರಕ್ರಿಯೆಯನ್ನು ಸೌದಿಯ ನ್ಯಾಯಾಲಯಗಳು ಈಗಾಗಲೇ ಆರಂಭಿಸಿವೆ. ಇದು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಡಲಾದ ಮಹತ್ವದ ಹೆಜ್ಜೆ’’ ಎಂದು ಸೌದಿ ಕಾನೂನು ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಹಾಕಲಾದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News