ಪತ್ರಕರ್ತರಿಗೆ ಗುಂಡಿಕ್ಕುವುದು ಸಹಿಷ್ಣು ಭಾರತದ ಸಂಸ್ಕೃತಿಯಲ್ಲ: ರಾಹುಲ್ ಗಾಂಧಿ

Update: 2019-01-12 16:06 GMT

ದುಬೈ, ಜ. 12: ಪತ್ರಕರ್ತರನ್ನು ಗುಂಡೇಟಿನಿಂದ ಪಾರು ಮಾಡುವುದು ಹಾಗೂ ಭಿನ್ನ ಅಭಿಪ್ರಾಯಗಳನ್ನು ಹೊಂದಿರುವವರು ಹಲ್ಲೆಗೆ ಒಳಗಾಗದಂತೆ ತಡೆಯುವುದು ಮುಂಬರುವ ಚುನಾವಣೆಯಲ್ಲಿ ನಾವು ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

‘‘ನಾವು ಬಯಸುವುದು ತಮ್ಮ ಅಭಿಪ್ರಾಯಗಳನ್ನು ಹೇಳಿದಾಗ ಪತ್ರಕರ್ತರಿಗೆ ಗುಂಡು ಹಾರಿಸುವ ಹಾಗೂ ಜನರನ್ನು ಹೊಡೆಯುವ ಭಾರತವನ್ನಲ್ಲ. ನಾವು ಬಯಸುವುದು ಸಹಿಷ್ಣು ಭಾರತವನ್ನು. ಮುಂಬರುವ ಚುನಾವಣೆಯಲ್ಲಿ ಇದು ಪ್ರಮುಖ ಸವಾಲಾಗಿದೆ’’ ಎಂದು ಐಎಂಟಿ ದುಬೈ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

‘‘ಸಹಿಷ್ಣುತೆ ನಮ್ಮ ಸಂಸ್ಕೃತಿಯಲ್ಲೇ ಬೆಸೆದುಕೊಂಡಿದೆ. ಆದರೆ ಇಂದು ನಾವು ಭಾರೀ ಅಸಹಿಷ್ಣುತೆಯನ್ನು ಎದುರಿಸುತ್ತಿದ್ದೇವೆ. ಅದು ಪ್ರಸಕ್ತ ಸರಕಾರದಿಂದ ಹೊರಹೊಮ್ಮುತ್ತಿದೆ’’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.

‘‘ನನ್ನ ನಿಲುವಿಗಿಂತ ಸಂಪೂರ್ಣ ಬೇರೆಯಾಗಿರುವ ನಿಲುವನ್ನೂ ಪರಿಶೀಲಿಸುವಂತೆ ಭಾರತ ನನಗೆ ಕಲಿಸಿದೆ’’ ಎಂದರು.

ವಿದೇಶಕ್ಕೆ ಹೋದವರು ಮರಳುವ ವಾತಾವರಣ ಸೃಷ್ಟಿಯಾಗಬೇಕು

ಉತ್ತಮ ಅವಕಾಶಗಳನ್ನು ಅರಸಿ ವಿದೇಶಕ್ಕೆ ಹೋಗಿರುವವರು ಮರಳಲು ಸಾಧ್ಯವಾಗುವಂತೆ ಭಾರತದಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದು ರಾಹುಲ್ ಹೇಳಿದರು.

‘‘ಪ್ರತಿಭಾ ಪಲಾಯನ 20ನೇ ಶತಮಾನದ ಕಲ್ಪನೆಯಾಗಿತ್ತು. 21ನೇ ಶತಮಾನದಲ್ಲಿ ಜನರು ಹೆಚ್ಚು ಸಂಚರಿಸುತ್ತಿದ್ದಾರೆ ಹಾಗೂ ನೈಜ ಅವಕಾಶಗಳು ಇದ್ದಲ್ಲಿಗೆ ಹೋಗುತ್ತಾರೆ. ನಮ್ಮ ದೇಶದಲ್ಲೇ ಅವಕಾಶಗಳು ಸೃಷ್ಟಿಯಾಗುವಂತೆ ಮಾಡಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News