ಸೌದಿಯಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರರಿಗೆ ಜೈಲಿನಲ್ಲಿ ಹಿಂಸೆ: ಆರೋಪ

Update: 2019-01-14 16:20 GMT

ರಿಯಾದ್, ಜ. 14: ಸೌದಿ ಅರೇಬಿಯದ ಹಲವಾರು ಮಹಿಳಾ ಹಕ್ಕುಗಳ ಹೋರಾಟಗಾರರಿಗೆ ಜೈಲಿನಲ್ಲಿ ಹಿಂಸೆ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ಆಘಾತ ಮತ್ತು ಛಡಿಯೇಟು ಸೇರಿದಂತೆ ಮಹಿಳಾ ಹೋರಾಟಗಾರರಿಗೆ ಅಜ್ಞಾತ ಸ್ಥಳವೊಂದರ ರಹಸ್ಯ ಜೈಲಿನಲ್ಲಿ ಹಿಂಸೆ ನೀಡಲಾಗಿದೆ ಎಂದು ಈ ಬಗ್ಗೆ ಮಾಹಿತಿಯುಳ್ಳ ನಾಲ್ವರು ವ್ಯಕ್ತಿಗಳು ಹೇಳಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಸರಕಾರದ ಮಾನವಹಕ್ಕುಗಳ ಆಯೋಗ ತನ್ನದೇ ಆದ ತನಿಖೆ ಮಾಡಿದ ಬಳಿಕ ಪ್ರಾಸಿಕ್ಯೂಟರ್ ಕಚೇರಿ ಮಧ್ಯಪ್ರವೇಶಿಸಿದೆ.

ತಮ್ಮನ್ನು ಮೇ ತಿಂಗಳಲ್ಲಿ ಬಂಧಿಸಿದ ಬಳಿಕ ತಮ್ಮ ಮೇಲೆ ದೈಹಿಕ, ಮಾನಸಿಕ, ಲೈಂಗಿಕ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಈ ಮಹಿಳೆಯರು ಆರೋಪಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯರ ಹೇಳಿಕೆಗಳನ್ನು ಪಡೆದುಕೊಳ್ಳಲು ಪ್ರಾಸಿಕ್ಯೂಟರ್‌ಗಳು ಜೈಲಿನಲ್ಲಿ ಅವರನ್ನು ಭೇಟಿಯಾಗಿದ್ದಾರೆ.

ಲೂಜೈನ್ ಅಲ್ ಹತ್‌ಲೂಲ್, ಅಝೀಝಾ ಅಲಿಯೂಸುಫ್ ಮತ್ತು ಇಮಾನ್ ಅಲ್ನಫ್ಜನ್ ಮುಂತಾದ ಮಹಿಳಾ ಹಕ್ಕುಗಳ ಹೋರಾಟಗಾರರು ಸೌದಿ ಮಹಿಳೆಯರ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದರು. ಅವರನ್ನು ಹಾಗೂ ಅವರಿಗೆ ಬೆಂಬಲ ನೀಡುತ್ತಿದ್ದ ಪುರುಷರನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.

‘‘ನನ್ನನ್ನು ಏಕಾಂತ ಬಂಧನದಲ್ಲಿ ಇಡಲಾಗಿದೆ, ನನಗೆ ಹೊಡೆಯಲಾಗಿದೆ, ವಾಟರ್‌ಬೋರ್ಡ್ ಹಿಂಸೆ ನೀಡಲಾಗಿದೆ, ಲೈಂಗಿಕ ಕಿರುಕುಳ ನೀಡಲಾಗಿದೆ ಹಾಗೂ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂಬುದಾಗಿ ಲೂಜೈನ್ ಅಲ್ ಹತ್‌ಲೂಲ್ ತನ್ನ ಹೆತ್ತವರೊಂದಿಗೆ ಹೇಳಿದ್ದಾರೆ ಎಂಬುದಾಗಿ ಅವರ ಸಹೋದರಿ ಅಲಿಯಾ ಅಲ್ ಹತ್‌ಲೂಲ್ ರವಿವಾರ ‘ನ್ಯೂಯಾರ್ಕ್ ಟೈಮ್ಸ್’ನ ಅಂಕಣದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News