ಅಬುಧಾಬಿ: ಕ್ಯಾಟರಿಂಗ್ ಕಂಪೆನಿಯಿಂದ ವಂಚನೆಗೊಳಗಾದ ಕಾರ್ಮಿಕರಿಗೆ ಪರಿಹಾರ

Update: 2019-01-18 17:26 GMT

ಅಬುಧಾಬಿ, ಜ. 18: ಅಬುಧಾಬಿಯ ಕ್ಯಾಟರಿಂಗ್ ಕಂಪನಿಯೊಂದರಿಂದ ವಂಚನೆಗೊಳಗಾಗಿ ಸಂಬಳ ಮತ್ತು ಆಹಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ಏಶ್ಯದ ಕಾರ್ಮಿಕರಿಗೆ ಸಂಬಂಧಿಸಿದ ವಿವಾದವೊಂದನ್ನು ಗುರುವಾರ ಪರಿಹರಿಸಲಾಗಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಉನ್ನತ ಕಾರ್ಮಿಕ ಅಧಿಕಾರಿಗಳು, ಅಬುಧಾಬಿ ನ್ಯಾಯಾಂಗ ಇಲಾಖೆ (ಎಡಿಜೆಡಿ) ಮತ್ತು ರಾಜತಾಂತ್ರಿಕ ಕಚೇರಿಗಳ ಪ್ರಯತ್ನಗಳ ಫಲವಾಗಿ ಸುಮಾರು 400 ಕಾರ್ಮಿಕರು ಪರಿಹಾರ ಪಡೆಯುವಂತಾಗಿದೆ.

ಉದ್ಯೋಗದಾತರು ಒದಗಿಸಿರುವ ಬ್ಯಾಂಕ್ ಖಾತರಿಯನ್ನು ವಶಪಡಿಸಿಕೊಂಡು ಕಾರ್ಮಿಕರಿಗೆ ಬಾಕಿ ಮಜೂರಿಯಾಗಿ 30 ಲಕ್ಷ ದಿರ್ಹಮ್ (ಸುಮಾರು 5.8 ಕೋಟಿ ರೂಪಾಯಿ) ನೀಡಲಾಗಿದೆ ಎಂದು ಎಡಿಜೆಡಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ವಂಚನೆಗೊಳಗಾದ ಕಾರ್ಮಿಕರಲ್ಲಿ ಹೆಚ್ಚಿನವರು ಭಾರತ, ಬಾಂಗ್ಲಾದೇಶ, ನೇಪಾಳ, ಈಜಿಪ್ಟ್, ನೈಜೀರಿಯ ಮತ್ತು ಫಿಲಿಪ್ಪೀನ್ಸ್ ದೇಶಗಳ ಪ್ರಜೆಗಳು. ಅವರು ಅಲ್ ವಾಸಿತ ಕ್ಯಾಟರಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.

ತಾವು ಮನೆಗಳಿಗೆ ಹಿಂದಿರುಗಲು ಸಹಾಯಕವಾಗುವಂತೆ, ತಮ್ಮ ಬಾಕಿ ಮಜೂರಿ ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಅವರು ಒತ್ತಾಯಿಸುತ್ತಿದ್ದರು.

ಕಂಪೆನಿಯ ಮಾಲೀಕರು ಯುಎಇಯಿಂದ ಪರಾರಿಯಾದ ಬಳಿಕ ಕಾರ್ಮಿಕರು ಅತಂತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News