ಫೆಬ್ರವರಿ 28ರಿಂದ ಜಿದ್ದಾದಲ್ಲಿ ಮೊದಲ ‘ಜಾಗತಿಕ ಹಳ್ಳಿ’ ಹಬ್ಬ

Update: 2019-01-21 17:17 GMT

ಜಿದ್ದಾ, ಜ. 21: ಸೌದಿ ಅರೇಬಿಯದ ಇತಿಹಾಸದಲ್ಲೇ ಮೊದಲ ಬಾರಿಗೆ ಜಿದ್ದಾದಲ್ಲಿ ಬಹು ಸಂಸ್ಕೃತಿಯ ‘ಜಾಗತಿಕ ಹಳ್ಳಿ’ ಹಬ್ಬ ಜರಗಲಿದೆ. ಈ ಹಬ್ಬವು ಸಂದರ್ಶಕರನ್ನು 50 ದೇಶಗಳ ‘ಪ್ರವಾಸ’ಕ್ಕೆ ಕರೆದೊಯ್ಯಲಿದೆ.

ಫೆಬ್ರವರಿ 28ರಿಂದ ಮಾರ್ಚ್ 29ರವರೆಗೆ ಪ್ರತಿದಿನ ಸಂಜೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ಜಿದ್ದಾದ ಪ್ರಸಿದ್ಧ ಕಡಲ ತಡಿಯುದ್ದಕ್ಕೂ ಇರುವ ‘ಅತಲ್ಲಾ ಹ್ಯಾಪಿ ಲ್ಯಾಂಡ್ ಪಾರ್ಕ್’ನ ಒಳಗೆ ಜಾಗತಿಕ ಹಳ್ಳಿಯನ್ನು ಸ್ಥಾಪಿಸಲಾಗುವುದು.

ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ವೃದ್ಧಿಸುವ ದೃಷ್ಟಿಯಿಂದ ರೂಪಿಸಲಾದ ಕಾರ್ಯಕ್ರಮಗಳ ಪೈಕಿ ಈ ಹಬ್ಬವೂ ಒಂದಾಗಿದೆ.

ಹಬ್ಬದಲ್ಲಿ 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹಬ್ಬವನ್ನು ಸಂಘಟಿಸುವ ಕಂಪೆನಿ ಇಂಟರ್‌ನ್ಯಾಶನಲ್ ಇಮೇಜ್‌ನ ಮಹಾ ನಿರ್ದೇಶಕ ಸುಝನ್ ಎಸ್ಕಂದರ್ ‘ಅರಬ್ ನ್ಯೂಸ್’ ಪತ್ರಿಕೆಗೆ ತಿಳಿಸಿದರು.

‘‘ಹಬ್ಬದಲ್ಲಿ ಭಾಗವಹಿಸುವ ಇಚ್ಛೆಯನ್ನು ಸುಮಾರು 50 ದೇಶಗಳ ಜನರು ವ್ಯಕ್ತಪಡಿಸಿದ್ದಾರೆ. 45,000 ಚದರ ಮೀಟರ್ ವಿಸ್ತೀರ್ಣದ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ’’ ಎಂದು ಅವರು ಹೇಳಿದರು.

ಐದು ಕೊಲ್ಲಿ ಸಹಕಾರ ಮಂಡಳಿಯ ದೇಶಗಳು, 10 ಅರಬ್ ದೇಶಗಳು, 18 ಆಫ್ರಿಕ ದೇಶಗಳು, 10 ಯುರೋಪಿಯನ್ ದೇಶಗಳು ಮತ್ತು ನಾಲ್ಕು ಅಮೆರಿಕ ಖಂಡಗಳ ದೇಶಗಳಿಂದ ಭಾಗವಹಿಸುವವರಿಗಾಗಿ ಪೆವಿಲಿಯನ್‌ಗಳಿರುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News