ಸೌದಿ ಆಡಳಿತದಿಂದ ಇಥಿಯೋಪಿಯನ್ ಉದ್ಯಮಿ ಅವೌದಿ ಬಿಡುಗಡೆ

Update: 2019-01-28 17:42 GMT

ರಿಯಾದ್,ಜ.28: ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತರಾದ 14 ತಿಂಗಳುಗಳ ಬಳಿಕ ಸೌದಿ- ಇಥಿಯೋಪಿಯನ್ ಉದ್ಯಮಿ ಮುಹಮ್ಮದ್ ಹುಸೈನ್ ಅಲ್ ಅವೌದಿ ಅವರನ್ನು ಸೌದಿ ಆಡಳಿತ ಶನಿವಾರ ಬಂಧಮುಕ್ತಗೊಳಿಸಿದೆ.

ಇಥಿಯೋಪಿಯಾದ ಅತ್ಯಂತ ಶ್ರೀಮಂತ ಉದ್ಯಮಿಯೆಂದು ಫೋರ್ಬ್ಸ್ ಪತ್ರಿಕೆಯ ರ್ಯಾಂಕಿಂಗ್‌ನಲ್ಲಿ ಅವೌದಿ ಈ ಹಿಂದೆ ಸ್ಥಾನ ಪಡೆದಿದ್ದರು. 2017ರ ನವೆಂಬರ್‌ನಲ್ಲಿ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ಆದೇಶದಂತೆ ನಡೆದ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟು, ರಿಯಾದ್‌ನ ರಿಟ್ಝ್-ಕಾರ್ಲ್‌ಟನ್ ಹೊಟೇಲ್‌ನಲ್ಲಿ ದಿಗ್ಬಂಧನದಲ್ಲಿರಿಸಲ್ಪಟ್ಟು ಸೌದಿಯ ಹಲವಾರು ಉದ್ಯಮಿಗಳು ಹಾಗೂ ರಾಜಕೀಯ ಗಣ್ಯರಲ್ಲಿ ಅವೌದ್ ಕೂಡಾ ಒಬ್ಬರಾಗಿದ್ದರು. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಹಲವಾರು ಉದ್ಯಮಿಗಳನ್ನು ಸೌದಿ ಆಡಳಿತ ಕಳೆದ ವಾರ ಬಿಡುಗಡೆಗೊಳಿಸಿತ್ತು. ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆ ಹಾಗೂ ಮಹಿಳಾ ಹಕ್ಕುಗಳಹೋರಾಟಗಾರ್ತಿಯರ ಬಂಧನದ ಹಿನ್ನೆಲೆಯಲ್ಲಿ ಜಾಗತಿಕವಾಗಿ ತೀವ್ರ ವಿರೋಧವನ್ನು ಸೌದಿ ಆಡಳಿತ ಎದುರಿಸುತ್ತಿರುವ ಬೆನ್ನಲ್ಲೇ, ಈ ಉದ್ಯಮಿಗಳ ಬಿಡುಗಡೆಯಾಗಿದೆ.

ಈ ಮಧ್ಯೆ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅವರು ಅವೌದಿ ಅವರ ಬಿಡುಗಡೆಯನ್ನು ಟ್ವಿಟರ್‌ನಲ್ಲಿ ದೃಢಪಡಿಸಿದ್ದಾರೆ. ರಿಯಾದ್‌ಗೆ ಕಳೆದ ಮೇನಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವೌದಿಯವರ ಬಂಧನ ವಿಷಯವನ್ನು ಸೌದಿಯ ಯುವರಾಜ ಮುಹಮ್ಮದ್ ಸಲ್ಮಾನ್ ಜೊತೆ ಪ್ರಸ್ತಾಪಿಸಿದ್ದಾಗಿ ಅವರು ಹೇಳಿದ್ದಾರೆ. 70 ವರ್ಷ ವಯಸ್ಸಿನ ಅವೌದಿ ಅವರು ಇಥಿಯೋಪಿಯಾದಲ್ಲಿ ಕಟ್ಟಡ ನಿರ್ಮಾಣ, ಕೃಷಿ ಹಾಗೂ ಗಣಿಗಾರಿಕೆ ಹೂಡಿಕೆ ಮಾಡಿದ್ದಾರೆ. ಮೊರಾಕ್ಕೊ ಹಾಗೂ ಸ್ವೀಡನ್‌ಗಳಲ್ಲೂ ಅವರು ತೈಲ ಸಂಸ್ಕರಣಾಗಾರಗಳನ್ನು ಖರೀದಿಸಿದ್ದಾರೆ. 2016ರಲ್ಲಿ ಅವೌದಿ ಅವರು 10 ಶತಕೋಟಿ ಡಾಲರ್ ಸಂಪತ್ತಿನ ಒಡೆಯರಾಗಿದ್ದರೆಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು.

ಅವೌದಿ ಅವರ ಬಿಡುಗಡೆಯಾಗಿ ಪ್ರತಿಯಾಗಿ ಅವರ ಸಂಪತ್ತಿನ ಎಷ್ಟು ಮೊತ್ತವನ್ನ್ನು ಸೌದಿ ಸರಕಾರಕ್ಕೆ ಹಸ್ತಾಂತರಿಸಲಾಗಿದೆಯೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News