ಖತರ್ ಆಟಗಾರರತ್ತ ಚಪ್ಪಲಿ ಎಸೆದ ಘಟನೆ: ತನಿಖೆಗೆ ಮುಂದಾದ ಎಎಫ್‌ಸಿ

Update: 2019-01-30 18:13 GMT

ಅಬುಧಾಬಿ, ಜ.30: ಯುಎಇ ವಿರುದ್ಧ ಮಂಗಳವಾರ ನಡೆದ ಏಶ್ಯಕಪ್ ಫುಟ್ಬಾಲ್ ಸೆಮಿಫೈನಲ್ ಪಂದ್ಯದ ವೇಳೆ ಖತರ್ ಆಟಗಾರರತ್ತ ಹಲವು ಚಪ್ಪಲಿ ಹಾಗೂ ನೀರಿನ ಬಾಟಲಿಗಳನ್ನು ತೂರಿದ ಘಟನೆಗೆ ಸಂಬಂಧಿಸಿ ಏಶ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ) ತನಿಖೆಗೆ ಮುಂದಾಗಿದೆ.

ಆತಿಥೇಯ ಯುಎಇ ವಿರುದ್ಧ 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದ ಸಂಭ್ರಮದಲ್ಲಿದ್ದ ಮೂವರು ಖತರ್ ಆಟಗಾರರತ್ತ ನೆರೆದಿದ್ದ ಪ್ರೇಕ್ಷಕರು ಪಾದರಕ್ಷೆ ಹಾಗೂ ನೀರಿನ ಬಾಟಲ್‌ಗಳನ್ನು ತೂರಿ ಅವಮಾನಿಸಲು ಯತ್ನಿಸಿದ್ದರು. ಭರ್ಜರಿ ಜಯ ಸಾಧಿಸಿದ್ದ ಖತರ್ ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

‘‘ಅಬುಧಾಬಿಯಲ್ಲಿರುವ ಮುಹಮ್ಮದ್ ಬಿನ್ ಝಾಯೆದ್ ಸ್ಟೇಡಿಯಂನಲ್ಲಿ ಯುಎಇ ಹಾಗೂ ಖತರ್ ಮಧ್ಯೆ ನಡೆದ ಏಶ್ಯನ್ ಕಪ್ ಸೆಮಿ ಫೈನಲ್ ಪಂದ್ಯದ ವೇಳೆ ನಡೆದಿದ್ದ ಅಹಿತಕರ ಘಟನೆಯ ಬಗ್ಗೆ ಎಎಫ್‌ಸಿ ಸಮಗ್ರ ತನಿಖೆ ನಡೆಸಲಿದೆ. ತನಿಖೆ ಕೊನೆಗೊಂಡ ತಕ್ಷಣ ಎಎಫ್‌ಸಿ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಿದೆ’’ ಎಂದು ಎಎಫ್‌ಸಿ ವಕ್ತಾರ ಬುಧವಾರ ತಿಳಿಸಿದ್ದಾರೆ.

ಸೌದಿ ಅರೇಬಿಯ, ಈಜಿಪ್ಟ್ ಹಾಗೂ ಬಹರೈನ್ 2017ರಲ್ಲಿ ಖತರ್ ದೇಶದ ವಿರುದ್ಧ ರಾಜತಾಂತ್ರಿಕ ಹಾಗೂ ಆರ್ಥಿಕ ಬಹಿಷ್ಕಾರ ವಿಧಿಸಿದ್ದವು.

ಬಹಿಷ್ಕರಿಸಿರುವ ನಾಲ್ಕು ದೇಶಗಳು ಖತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದವು. 2022ರ ಫಿಫಾ ವಿಶ್ವಕಪ್ ಆತಿಥ್ಯವಹಿಸಿರುವ ಖತರ್ ಈ ಆರೋಪವನ್ನು ನಿರಾಕರಿಸಿದೆ.

ಬಹಿಷ್ಕಾರದ ಹಿನ್ನೆಲೆಯಲ್ಲಿ ಏಶ್ಯಕಪ್ ಪಂದ್ಯ ವೀಕ್ಷಿಸಲು ಖತರ್ ಫುಟ್ಬಾಲ್ ಅಭಿಮಾನಿಗಳು ಯುಎಇಗೆ ಪ್ರಯಾಣಿಸಿರಲಿಲ್ಲ. ಪಂದ್ಯ ಹೌಸ್‌ಫುಲ್ ಪ್ರದರ್ಶನ ಕಾಣಲು ಸ್ಥಳೀಯ ಕ್ರೀಡಾಧಿಕಾರಿಗಳು ಸ್ಥಳೀಯರಿಗೆ ಸಾವಿರಾರು ಉಚಿತ ಟಿಕೆಟ್‌ಗಳನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News