ಹೌದಿ ಬಂಡುಕೋರರಿಂದ ಹಲವು ಪ್ರದೇಶಗಳನ್ನು ವಶಕ್ಕೆ ಪಡೆದ ಮಿತ್ರ ಪಡೆ

Update: 2019-02-03 15:17 GMT

ದುಬೈ, ಫೆ. 3: ಯೆಮನ್ ದೇಶದ ಅಲ್-ಜಾವ್ಫ್ ಪ್ರಾಂತದ ಉತ್ತರಕ್ಕಿರುವ ಖಾಬ್‌ನಲ್ಲಿ ಹೌದಿ ಬಂಡುಕೋರರ ವಶದಲ್ಲಿದ್ದ ಹಲವಾರು ಪ್ರದೇಶಗಳನ್ನು ಅರಬ್ ಮಿತ್ರಕೂಟ ಬೆಂಬಲಿತ ಯೆಮನಿ ಪಡೆಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಅಲ್-ಅಖ್ಬರಿಯ ವರದಿ ಮಾಡಿದೆ.

‘‘ಈ ಕಾಳಗದಲ್ಲಿ ಹಲವಾರು ಬಂಡುಕೋರರು ಸತ್ತಿದ್ದಾರೆ ಹಾಗೂ ಸೇನಾ ಶಿಬಿರಗಳಿಂದ ಬಂಡುಕೋರರು ದೋಚಿದ್ದ ಶಸ್ತ್ರಾಸ್ತ್ರಗಳನ್ನು ಸೈನಿಕರು ಪತ್ತೆಹಚ್ಚಿದ್ದಾರೆ’’ ಎಂದು ಬ್ರಿಗೇಡಿಯರ್ ಜನರಲ್ ಹಯ್ಕಲ್ ಹಂತಾಫ್ ತಿಳಿಸಿದರು.

ಖಾಬ್ ಪ್ರದೇಶದ ಕೇಂದ್ರ ಭಾಗ ಯೆಮನ್ ಸೈನಿಕರ ತೆಕ್ಕೆಗೆ ಬಂದಿರುವ ಹಿನ್ನೆಲೆಯಲ್ಲಿ, ಬರಾತ್ ಜಿಲ್ಲೆಯ ಹಲವಾರು ಸ್ಥಳಗಳಲ್ಲಿರುವ ಬಂಡುಕೋರರ ಪೂರೈಕೆ ರ್ಮಾ ಕಡಿತಗೊಂಡಿದೆ ಎಂದು ಯೆಮನ್‌ನ ಅಧಿಕೃತ ಸುದ್ದಿ ಸಂಸ್ಥೆ ಯೆಮನಿ ಪ್ರೆಸ್ ಏಜನ್ಸಿ ಹಂತಾಫ್‌ರನ್ನು ಉಲ್ಲೇಖಿಸಿ ವರದಿ ಮಾಡಿದೆ.

► 7,183 ನೆಲಬಾಂಬ್‌ಗಳ ತೆರವು

ಯೆಮನ್‌ನಲ್ಲಿ ಹೌದಿ ಬಂಡುಕೋರರು ಹೂತಿಟ್ಟಿರುವ ಒಟ್ಟು 7,183 ನೆಲಬಾಂಬ್‌ಗಳನ್ನು ದೊರೆ ಸಲ್ಮಾನ್ ಮಾನವೀಯ ನೆರವು ಕೇಂದ್ರ ಜನವರಿ ತಿಂಗಳ ನಾಲ್ಕನೇ ವಾರದಲ್ಲಿ ತೆರವುಗೊಳಿಸಿದೆ.

89 ಸೇನಾ ನಿಗ್ರಹ ಬಾಂಬ್‌ಗಳು, 2,322 ವಾಹನ ನಿರೋಧಕ ಬಾಂಬ್‌ಗಳು, 284 ಸ್ಫೋಟಕ ಸಾಧನಗಳು ಮತ್ತು 4,487 ಸ್ಫೋಟಿಸದೆ ಉಳಿದ ನೆಲಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News