ಸೌದಿ: ಅಕ್ರಮ ನಿವಾಸಿಗಳನ್ನು ಕೆಲಸಕ್ಕೆ ನೇಮಿಸಿದರೆ ಜೈಲು, ದಂಡ

Update: 2019-02-06 16:33 GMT

ಜಿದ್ದಾ, ಫೆ. 6: ಸೌದಿ ಅರೇಬಿಯದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರನ್ನು ಕೆಲಸಕ್ಕೆ ನೇಮಿಸುವ ಉದ್ಯಮಿಗಳು ಜೈಲು, ದಂಡ ಮತ್ತು ನೇಮಕಾತಿ ನಿಷೇಧವನ್ನು ಎದುರಿಸುತ್ತಾರೆ ಎಂದು ಸೌದಿ ಅರೇಬಿಯ ಎಚ್ಚರಿಕೆ ನೀಡಿದೆ.

ಸೌದಿ ಅರೇಬಿಯದ ವಾಸ್ತವ್ಯ, ಕಾರ್ಮಿಕ ಮತ್ತು ಗಡಿ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಕೆಲಸಕ್ಕೆ ನೇಮಿಸುವ, ಸಾಗಾಟ ಮಾಡುವ ಅಥವಾ ಅವರಿಗೆ ಆಶ್ರಯ ನೀಡುವವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ಸೌದಿ ರಿಯಾಲ್ (ಸುಮಾರು 19 ಲಕ್ಷ ರೂಪಾಯಿ) ದಂಡ ವಿಧಿಸಬಹುದಾಗಿದೆ ಎಂದು ಸೌದಿ ಪಾಸ್‌ಪೋರ್ಟ್ ಮಹಾ ನಿರ್ದೇಶನಾಲಯ ತಿಳಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸಿದವರು ವಿದೇಶಿಯರಾದರೆ, ಅವರನ್ನು ಗಡಿಪಾರು ಮಾಡಲಾಗುವುದು ಹಾಗೂ ಅದಕ್ಕೆ ಅನುಸಾರವಾಗಿ ದಂಡದ ಮೊತ್ತದಲ್ಲಿ ಬದಲಾವಣೆಯಾಗಲಿದೆ.

ನಿಯಮಗಳ ಉಲ್ಲಂಘನೆ ಮಾಡುವ ಉದ್ಯಮಿಗಳು 5 ವರ್ಷಗಳವರೆಗೆ ಕಾರ್ಮಿಕರನ್ನು ನೇಮಕ ಮಾಡದಂತೆ ನಿಷೇಧ ವಿಧಿಸಲಾಗುವುದು ಎಂದರು.

ಸೌದಿ ಅರೇಬಿಯದಲ್ಲಿ ಒಂದು ವರ್ಷ ಕಾಲ ನಡೆದ ಕಾರ್ಯಾಚರಣೆಯಲ್ಲಿ ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಸಿದ 25.4 ಲಕ್ಷ ವಿದೇಶಿಯರನ್ನು ಬಂಧಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News