ಖಶೋಗಿ ಮೃತದೇಹ ಎಲ್ಲಿದೆ ಎನ್ನುವುದು ಗೊತ್ತಿಲ್ಲ: ಸೌದಿ ಸಹಾಯಕ ವಿದೇಶ ಸಚಿವ

Update: 2019-02-11 15:26 GMT

ವಾಶಿಂಗ್ಟನ್, ಫೆ. 11: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯನ್ನು ಹತ್ಯೆಗೈದ ಸೌದಿ ತಂಡವನ್ನು ಬಂಧಿಸಿರುವ ಹೊರತಾಗಿಯೂ, ಅವರ ಮೃತದೇಹ ಎಲ್ಲಿದೆ ಎನ್ನುವುದು ಸೌದಿ ಅರೇಬಿಯಕ್ಕೆ ತಿಳಿದಿಲ್ಲ ಎಂದು ದೇಶದ ವಿದೇಶ ವ್ಯವಹಾರಗಳ ಸಹಾಯಕ ಸಚಿವ ಆದಿಲ್ ಅಲ್-ಜುಬೈರ್ ಹೇಳಿದ್ದಾರೆ.

ಸೌದಿ ಅಧಿಕಾರಿಗಳ ತಂಡವೊಂದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಸೌದಿ ಪತ್ರಕರ್ತನನ್ನು ಕೊಂದಿದೆ ಎಂದು ಎಂದು ರವಿವಾರ ಪ್ರಸಾರವಾದ ಸಿಬಿಎಸ್ ಸುದ್ದಿ ವಾಹಿನಿಯ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಅವರು ಹೇಳಿದರು. ಹತ್ಯೆಗೆ ಸಂಬಂಧಿಸಿ 11 ಜನರ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದೆ ಎಂದರು.

ಟರ್ಕಿಯ ತನ್ನ ಸ್ನೇಹಿತೆಯನ್ನು ಮದುವೆಯಾಗುವುದಕ್ಕಾಗಿ ದಾಖಲೆಪತ್ರಗಳನ್ನು ತರಲು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಖಶೋಗಿ ಕಳೆದ ವರ್ಷದ ಅಕ್ಟೋಬರ್ 2ರಂದು ಪ್ರವೇಶಿಸಿದ್ದರು. ಬಳಿಕ ಅವರು ಅಲ್ಲಿಂದ ಹೊರಬರಲಿಲ್ಲ.

ಅಲ್ಲಿ ಅವರನ್ನು ಬರ್ಬರವಾಗಿ ಹತ್ಯೆಗೈದು ದೇಹವನ್ನು ತುಂಡು ತುಂಡು ಮಾಡಲಾಗಿತ್ತು. ಆದರೆ, ಮೃತದೇಹದ ಅವಶೇಷಗಳು ಈವರೆಗೆ ಪತ್ತೆಯಾಗಿಲ್ಲ.

ಅವರ ಮೃತದೇಹ ಎಲ್ಲಿದೆ ಎಂಬ ಪ್ರಶ್ನೆಗೆ, ‘‘ನಮಗೆ ಗೊತ್ತಿಲ್ಲ’’ ಎಂದು ಜುಬೈರ್ ಉತ್ತರಿಸಿದರು. ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಾಸಿಕ್ಯೂಟರ್ ಟರ್ಕಿಯಿಂದ ಪುರಾವೆ ಕೇಳಿದ್ದಾರೆ, ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ತನಿಖೆ ಈಗಲೂ ನಡೆಯುತ್ತಿದೆ

ಮೃತದೇಹ ಎಲ್ಲಿದೆ ಎನ್ನುವುದನ್ನು ಬಂಧನದಲ್ಲಿರುವವರು ಯಾಕೆ ಹೇಳುತ್ತಿಲ್ಲ ಎಂಬ ಪ್ರಶ್ನೆಗೆ, ‘‘ತನಿಖೆ ಈಗಲೂ ನಡೆಯುತ್ತಿದೆ’’ ಎಂದರು.

‘‘ನಮ್ಮೆದುರು ಈಗ ಹಲವಾರು ಸಾಧ್ಯತೆಗಳು ಇವೆ. ಮೃತದೇಹವನ್ನು ಏನು ಮಾಡಿದ್ದೀರಿ ಎಂದು ನಾವು ಅವರನ್ನು ಪ್ರಶ್ನಿಸುತ್ತಿದ್ದೇವೆ. ಈ ತನಿಖೆ ಈಗಲೂ ಮುಂದುವರಿಯುತ್ತಿದೆ. ಅಂತಿಮವಾಗಿ ಸತ್ಯ ಏನೆಂಬುದನ್ನು ನಾವು ಪತ್ತೆಹಚ್ಚುತ್ತೇವೆ ಎನ್ನುವ ನಿರೀಕ್ಷೆಯಿದೆ’’ ಎಂದು ಸಹಾಯಕ ವಿದೇಶ ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News