ಭಾರತದ ಮೊದಲ ಕೇಂದ್ರೀಕೃತ ಕೂಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿರುವ ಯುಎಇಯ ತಬ್ರೀದ್

Update: 2019-02-14 17:22 GMT

ದುಬೈ,ಫೆ.14: ಯುಎಇ ಮೂಲದ ನ್ಯಾಷನಲ್ ಸೆಂಟ್ರಲ್ ಕೂಲಿಂಗ್ ಕಂಪನಿ(ತಬ್ರೀದ್)ಯು ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಬಿಒಒಟಿ(ನಿರ್ಮಾಣ, ಒಡೆತನ, ನಿರ್ವಹಣೆ ಮತ್ತು ವರ್ಗಾವಣೆ) ಆಧಾರದಲ್ಲಿ ಭಾರತದ ಮೊದಲ ಕೇಂದ್ರೀಕೃತ ಕೂಲಿಂಗ್ ವ್ಯವಸ್ಥೆಯನ್ನು ನಿರ್ಮಿಸಲು 30 ವರ್ಷಗಳ ಅವಧಿಗೆ ರಾಜ್ಯ ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

20,000 ರೆಫ್ರಿಜಿರೇಷನ್ ಟನ್‌ ಗಳ ಕೂಲಿಂಗ್ ಸಾಮರ್ಥ್ಯಕ್ಕಾಗಿ ತಬ್ರೀದ್ ಮತ್ತು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಎಪಿಸಿಆರ್‌ಡಿಎ)ದ ನಡುವೆ ಈ ಒಪ್ಪಂದವೇರ್ಪಟ್ಟಿದ್ದು, ಇದು ಗಲ್ಫ್ ಸಹಕಾರ ಮಂಡಳಿ ಮಾರುಕಟ್ಟೆಯ ಹೊರಗೆ ಸ್ಥಾಪನೆಯಾಗಲಿರುವ ಕಂಪನಿಯ ಮೊದಲ ಸ್ಥಾವರವಾಗಲಿದೆ.

ತಬ್ರೀದ್‌ನ ಕೇಂದ್ರೀಕೃತ ಕೂಲಿಂಗ್ ವ್ಯವಸ್ಥೆಯು ಉದ್ಯೋಗ ಮತ್ತು ಮನೆಗಳ ಸೃಷ್ಟಿ,ವಿಶ್ವದರ್ಜೆಯ ಮೂಲಸೌಕರ್ಯ,ಹಸಿರು ನಗರ ಮತ್ತು ದಕ್ಷ ಸಂಪನ್ಮೂಲ ನಿರ್ವಹಣೆಗಾಗಿ ಅಮರಾವತಿಗಾಗಿ ಸರಕಾರವು ಹೊಂದಿರುವ ನೀಲನಕ್ಷೆಯ ಭಾಗವಾಗಿದೆ.

ಹಾಲಿ ನಿರ್ಮಾಣಗೊಳ್ಳುತ್ತಿರುವ ರಾಜ್ಯ ವಿಧಾನಸಭೆ,ಉಚ್ಚ ನ್ಯಾಯಾಲಯ,ಸಚಿವಾಲಯ ಮತ್ತು ಇತರ ಸರಕಾರಿ ಕಟ್ಟಡಗಳ ವಾತಾನುಕೂಲ ಅಗತ್ಯವನ್ನು ಈ ವ್ಯವಸ್ಥೆಯು ಪೂರೈಸಲಿದ್ದು,2021ರ ಪೂರ್ವಾರ್ಧದಲ್ಲಿ ಸೇವೆಯು ಆರಂಭಗೊಳ್ಳಲಿದೆ. ಭಾರತದಲ್ಲಿ ಇದು ತಮ್ಮ ಮೊದಲ ಕೇಂದ್ರೀಕೃತ ಕೂಲಿಂಗ್ ಯೋಜನೆಯಾಗಿದ್ದು,ವಿಶ್ವದ ಬೃಹತ್ ಮತ್ತು ತ್ವರಿತವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿರುವ ದೇಶದಲ್ಲಿ ತಬ್ರೀದ್‌ನ ಮಹತ್ವದ ಹೆಜ್ಜೆಯನ್ನು ಸಂಕೇತಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಖಾಲಿದ್ ಅಬ್ದುಲ್ಲಾ ಅಲ್-ಕುಬೈಸಿ ಅವರು ಹೇಳಿದರು.

ಇತರ ಕೂಲಿಂಗ್ ವ್ಯವಸ್ಥೆಗಳಿಗೆ ಹೋಲಿಸಿದರೆ ಕೇಂದ್ರೀಕೃತ ಕೂಲಿಂಗ್ ವ್ಯವಸ್ಥೆಯು ನಗರ ಕಟ್ಟಡಗಳನ್ನು ತಂಪಾಗಿರಿಸಲು ಶೇ.50ರಷ್ಟು ಮಾತ್ರ ಪ್ರಾಥಮಿಕ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸುತ್ತದೆ. ಮಿತವ್ಯಕರವಾದ ವಾತಾನುಕೂಲದ ಈ ವಿಧಾನವು ಇತರ ಸಾಂಪ್ರದಾಯಿಕ ವಾತಾನುಕೂಲ ವ್ಯವಸ್ಥೆಗಳಿಗೆ ಹೋಲಿಸಿದರೆ ವಾಯ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಶಬ್ದವನ್ನು ಕಡಿಮೆಗೊಳಿಸುತ್ತದೆ.

ಭಾರತದಲ್ಲಿ ಮೊದಲ ಯೋಜನೆಯೊಂದಿಗೆ ಕಂಪನಿಯು ತನ್ನ ಅಸ್ತಿತ್ವವನ್ನು ಆರು ದೇಶಗಳಿಗೆ ವಿಸ್ತರಿಸಿಕೊಂಡಿದೆ ಎಂದು ತಬ್ರೀದ್‌ನ ಸಿಇಒ ಜಾಸಿಮ್ ಹುಸೇನ್ ಥಾಬೆಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News