ಮಧ್ಯಪ್ರಾಚ್ಯದ ಎಲ್ಲ ದೇಶಗಳ ಜೊತೆ ಆತ್ಮೀಯ ಸಂಬಂಧಕ್ಕೆ ಇರಾನ್ ಬಯಕೆ: ಹಸನ್ ರೂಹಾನಿ

Update: 2019-02-17 17:11 GMT

ದುಬೈ, ಫೆ. 17: ಮಧ್ಯಪ್ರಾಚ್ಯದಲ್ಲಿರುವ ಎಲ್ಲ ದೇಶಗಳ ಜೊತೆ ಇರಾನ್ ಆತ್ಮೀಯ ಸಂಬಂಧವನ್ನು ಹೊಂದಲು ಬಯಸಿದೆ ಎಂದು ಆ ದೇಶದ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಹೇಳಿದ್ದಾರೆ.

‘‘ಮಧ್ಯ ಪ್ರಾಚ್ಯದಲ್ಲಿ ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ ಈ ವಲಯದ ದೇಶಗಳ ಜೊತೆ ಕೆಲಸ ಮಾಡಲು ಇರಾನ್ ಸಿದ್ಧವಿದೆ... ನಮ್ಮ ಶತ್ರುಗಳಾದ ಅಮೆರಿಕ ಮತ್ತು ಇಸ್ರೇಲ್ ಇರಾನಿಯನ್ನರ ನಡುವೆ ಪ್ರತ್ಯೇಕತೆಯನ್ನು ಹುಟ್ಟುಹಾಕಲು ಬಯಸುತ್ತಿದೆ’’ ಎಂದು ದಕ್ಷಿಣ ಇರಾನ್‌ನ ಬಾಂದರೆ ಗೊನವೆ ಎಂಬ ನಗರದಲ್ಲಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಅವರು ಹೇಳಿದರು.

ಈ ಭಾಷಣ ಸರಕಾರಿ ಟಿವಿಯಲ್ಲಿ ನೇರಪ್ರಸಾರಗೊಂಡಿತು.

ಇರಾನ್ ಕುರಿತ ಅಮೆರಿಕದ ನೀತಿಯು ವಿಫಲಗೊಳ್ಳುವುದು ಖಚಿತ ಎಂದು ರೂಹಾನಿ ಅಭಿಪ್ರಾಯಪಟ್ಟರು.

‘‘ಅಮೆರಿಕ ಮತ್ತು ಇಸ್ರೇಲ್‌ಗಳ ಒತ್ತಡಕ್ಕೆ ನಾವು ಬಾಗುವುದಿಲ್ಲ’’ ಎಂದು ಅವರು ಘೋಷಿಸಿದರು.

►ಇತರ ದೇಶಗಳ ತೈಲ ರಫ್ತು ತಡೆಯಲು ಸೇನಾ ಕ್ರಮ

ಇರಾನ್ ಕಚ್ಚಾತೈಲದ ರಫ್ತನ್ನು ತಡೆಯುವುದಕ್ಕಾಗಿ ಅಮೆರಿಕ ವಿಧಿಸಿರುವ ದಿಗ್ಬಂಧನಗಳಿಗೆ ಪ್ರತೀಕಾರವಾಗಿ, ಇತರ ದೇಶಗಳು ತೈಲ ರಫ್ತು ಮಾಡುವುದನ್ನು ತಡೆಯಲು ಕೊಲ್ಲಿಯಲ್ಲಿ ಇರಾನ್ ಸೇನಾ ಕ್ರಮವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ಇಂಗಿತವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News