ಒಮಾನ್: ವಿದೇಶಿ ನರ್ಸ್ ಗಳ ಸ್ಥಾನದಲ್ಲಿ ಸ್ವದೇಶಿಯರ ನೇಮಕ

Update: 2019-02-17 17:16 GMT

ದುಬೈ, ಫೆ. 17: ಒಮಾನೀಕರಣ ಪ್ರಕ್ರಿಯೆಯ ಭಾಗವಾಗಿ, ಒಮಾನ್‌ನಲ್ಲಿರುವ ವಿದೇಶಿ ನರ್ಸ್‌ಗಳ ಸ್ಥಾನದಲ್ಲಿ ದೇಶದ ಪ್ರಜೆಗಳನ್ನು ನೇಮಿಸಲಾಗುವುದು ಎಂದು ‘ಟೈಮ್ಸ್ ಆಫ್ ಒಮಾನ್’ ವರದಿ ಮಾಡಿದೆ.

ದೇಶಾದ್ಯಂತವಿರುವ 200 ವಿದೇಶಿ ನರ್ಸ್‌ಗಳ ಸ್ಥಾನದಲ್ಲಿ ದೇಶಿ ನರ್ಸ್‌ಗಳನ್ನು ನೇಮಿಸಲಾಗುವುದು ಎಂದು ಒಮಾನ್ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.

ಒಮಾನ್ ಸರಕಾರವು ಕಳೆದ ವರ್ಷದ ಜನವರಿಯಲ್ಲಿ ಆರು ತಿಂಗಳ ಅವಧಿಗೆ ವಿದೇಶಿಯರಿಗೆ ವೀಸಾ ನಿಷೇಧವನ್ನು ಜಾರಿಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಬಳಿಕ ನಿಷೇಧವನ್ನು ಇನ್ನೊಂದು ಆರು ತಿಂಗಳ ಅವಧಿಗೆ ವಿಸ್ತರಿಸಲಾಯಿತು.

ವೀಸಾ ನಿಷೇಧದ ಅವಧಿಯಲ್ಲಿ ಖಾಸಗಿ ಕ್ಷೇತ್ರದ ಕಂಪೆನಿಗಳು 64,386 ಒಮಾನ್ ಪ್ರಜೆಗಳನ್ನು ಕೆಲಸಕ್ಕೆ ನೇಮಿಸಿದವು. ಇದೇ ಅವಧಿಯಲ್ಲಿ ಸರಕಾರಿ ಸಂಸ್ಥೆಗಳು 4,125 ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡಿವೆ.

ಐತಿಹಾಸಿಕವಾಗಿ ಕೊಲ್ಲಿ ದೇಶಗಳು ತಮ್ಮ ಆರ್ಥಿಕತೆಗೆ ಚೈತನ್ಯ ನೀಡಲು ವಿದೇಶಿ ಕೆಲಸಗಾರರನ್ನೇ ಆಶ್ರಯಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

►ವಿದೇಶಿ ಉದ್ಯೋಗಿಗಳ ಸುವರ್ಣಯುಗ ಇನ್ನಿಲ್ಲ!

2013ರ ಅಧ್ಯಯನವೊಂದರ ಪ್ರಕಾರ, ಒಮಾನ್‌ನ ಕಾರ್ಮಿಕ ಬಲದ 71 ಶೇಕಡ ವಿದೇಶಿಯರು. ಕತರ್‌ನಲ್ಲಿ ವಿದೇಶಿ ಕೆಲಸಗಾರರ ಸಂಖ್ಯೆ ಈ ಅವಧಿಯಲ್ಲಿ 95 ಶೇಕಡ ಆಗಿದ್ದರೆ, ಯುಎಇಯಲ್ಲಿ 94 ಶೇಕಡ ಆಗಿತ್ತು. 2013ರಲ್ಲಿ ಕುವೈತ್‌ನಲ್ಲಿ ವಿದೇಶಿ ಕಾರ್ಮಿಕರ ಸಂಖ್ಯೆ 83 ಶೇಕಡ ಆಗಿದ್ದರೆ, ಬಹರೈನ್‌ನ ಉದ್ಯೋಗಿಗಳ ಸಂಖ್ಯೆ 64 ಶೇಕಡ ಹಾಗೂ ಸೌದಿ ಅರೇಬಿಯದ ವಿದೇಶಿ ಕಾರ್ಮಿಕರ ಪ್ರಮಾಣ 49 ಶೇಕಡ ಆಗಿತ್ತು.

ಆ ಬಳಿಕ ಕೊಲ್ಲಿ ರಾಷ್ಟ್ರಗಳು ಸ್ವದೇಶೀಕರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವು ಹಾಗೂ ತಮ್ಮ ನಾಗರಿಕರನ್ನೇ ಹೆಚ್ಚು ಹೆಚ್ಚಾಗಿ ಕೆಲಸಕ್ಕೆ ಸೇರಿಸಿಕೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News