ಅಬುಧಾಬಿ ಇಸ್ಲಾಮಿಕ್ ಸಮಾವೇಶದಲ್ಲಿ ಸುಷ್ಮಾ ಸ್ವರಾಜ್ ಗೌರವ ಅತಿಥಿ

Update: 2019-02-23 11:56 GMT

ಹೊಸದಲ್ಲಿ, ಫೆ.23: ಮಹತ್ವದ ಬೆಳವಣಿಗೆಯೊಂದರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಸಚಿವ ಮಂಡಳಿಯ 46ನೇ ಅಧಿವೇಶಕ್ಕೆ ಗೌರವ ಅತಿಥಿಯನ್ನಾಗಿ ಆಹ್ವಾನಿಸಿದೆ. ಮಾರ್ಚ್ 1 ಹಾಗೂ 2ರಂದು ಈ ಅಧಿವೇಶನ ನಡೆಲಿದೆ.

ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಸುಷ್ಮಾ ಅವರಿಗೆ ಆಮಂತ್ರಣ ನೀಡಿದರು. ಅಬುಧಾಬಿಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುವರು.

ಸುಷ್ಮಾ ಅವರಿಗೆ ಆಮಂತ್ರಣ ನೀಡಿದ ಯುಎಇ ವಿದೇಶಾಂಗ ಸಚಿವಾಲಯ, "ಸ್ನೇಹರಾಷ್ಟ್ರ ಭಾರತವನ್ನು ಗೌರವ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ. ಭಾರತದ ಅಂತರರಾಷ್ಟ್ರೀಯ ರಾಜಕೀಯ ಬಲ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಹಾಗೂ ಮಹತ್ವದ ಇಸ್ಲಾಮಿಕ್ ಅಂಶದ ಆಧಾರದಲ್ಲಿ ಆಹ್ವಾನಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದೆ.

"ಯುಎಇ ನೀಡಿರುವ ಈ ಆಹ್ವಾನವನ್ನು ನಮ್ಮ ಕ್ಷಿಪ್ರವಾಗಿ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧವನ್ನು ಮೀರಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆಯ ಪ್ರತೀಕ ಎಂದು ಭಾವಿಸುತ್ತೇವೆ" ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News