ದುಬೈ: ತುಂಬೆ ಆಸ್ಪತ್ರೆ ವತಿಯಿಂದ ಸಹಿಷ್ಣುತೆ ವಾಕಥಾನ್‌ - ಸಾವಿರಾರು ಮಂದಿ ಭಾಗಿ

Update: 2019-02-23 17:59 GMT

ದುಬೈ, ಫೆ. 23: ತುಂಬೆ ಆಸ್ಪತ್ರೆ ದುಬೈಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಹಿಷ್ಣುತೆ ವಾಕಥಾನ್ (ಟಾಲರೆನ್ಸ್ ವಾಕಥಾನ್) ನಲ್ಲಿ ವಿವಿಧ ದೇಶಗಳ ಮಕ್ಕಳಿಂದ ವಯಸ್ಕರವರೆಗೆ 1,600 ಮಂದಿ ಭಾಗವಹಿಸಿದರು.

ಯುಎಇಯ ಸ್ಥಾಪನಾ ತತ್ವಗಳು ಮತ್ತು ದೇಶದ ನಾಯಕತ್ವದ ಆದರ್ಶಗಳ ಹಿನ್ನೆಲೆಯಲ್ಲಿ 2019ನ್ನು ಸಹಿಷ್ಣುತೆಯ ವರ್ಷ ಎಂದು ಆಚರಿಸಲಾಗುತ್ತಿದ್ದು ಇದರ ಭಾಗವಾಗಿ ತುಂಬೆ ಆಸ್ಪತ್ರೆ ಈ ವಾಕಥಾನ್ ಆಯೋಜಿಸಿತ್ತು.

ಈ ವಾಕಥಾನ್‌ಗೆ ದುಬೈ ಪೊಲೀಸ್, ಆರ್‌ಟಿಎ, ದುಬೈ ಕ್ರೀಡಾ ಮಂಡಳಿ, ದುಬೈ ಪೊಲೀಸ್ ಅಲ್ ಕುಸೈಸ್ ವಿಭಾಗ, ದುಬೈ ಪೊಲೀಸ್ ನಿರ್ಣಯ ಮಂಡಳಿ, ದುಬೈ ಪೊಲೀಸ್ ಸಂಚಾರಿ ವಿಭಾಗ, ಸಮುದಾಯ ಸಂತೋಷ ಇಲಾಖೆ, ಕ್ರೀಡಾ ವ್ಯವಹಾರಗಳ ಇಲಾಖೆ, ದುಬೈ ನಾಗರಿಕ ಭದ್ರತೆ ಮತ್ತು ದುಬೈ ಆ್ಯಂಬುಲೆನ್ಸ್ ಬೆಂಬಲ ಸೂಚಿಸಿದ್ದವು.

ತುಂಬೆ ಸಮೂಹದ ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯಿದಿನ್ ತುಂಬೆ ವಾಕಥಾನ್‌ಗೆ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಅವರು, ಒಂದಿಡೀ ವರ್ಷವನ್ನು ಸಹಿಷ್ಣುತೆಗೆ ಮೀಸಲಿಡುವ ಜೊತೆಗೆ ಸಹಿಷ್ಣುತೆಗಾಗಿಯೇ ಸಚಿವಾಲಯವನ್ನು ರಚಿಸಿದ ಜಗತ್ತಿನ ಮೊಟ್ಟಮೊದಲ ಸರಕಾರ ಯುಎಇ ಸರಕಾರವಾಗಿದ್ದು ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಪರಸ್ಪರ ಗೌರವ ಮತ್ತು ಸಹಿಷ್ಣುತೆ ಪ್ರಗತಿಪರ ಸಮಾಜದ ಮುಖ್ಯ ಲಕ್ಷಣವಾಗಿದೆ ಎಂದು ತಿಳಿಸಿದರು.

ವಾಕಥಾನ್‌ನಲ್ಲಿ ಸಾಮಾನ್ಯ ಜನರ ಜೊತೆಗೆ ಕಾರ್ಪೊರೇಟ್ ತಂಡಗಳು ಮತ್ತು ವಿದ್ಯಾರ್ಥಿಗಳೂ ಸೇರಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಗೌರವಾರ್ಥ ಉಡುಗೊರೆಗಳನ್ನು ನೀಡಲಾಯಿತು. ವಾಕಥಾನ್‌ನ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News