ತುಂಬೆ ಆಸ್ಪತ್ರೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಮಂಝಿಲ್ ಹೆಲ್ತ್‌ಕೇರ್ ಸರ್ವಿಸಸ್

Update: 2019-02-24 17:39 GMT

ಅಜ್ಮಾನ್, ಫೆ. 24: ಉತ್ತರ ಎಮಿರೇಟ್ಸ್‌ನಲ್ಲಿ ಗೃಹ ಆರೋಗ್ಯ ಸೇವೆಯನ್ನು ಇನ್ನಷ್ಟು ಉತ್ಕೃಷ್ಟ ದರ್ಜೆಗೆ ಕೊಂಡೊಯ್ಯುವ ಉದ್ದೇಶದಿಂದ ಯುಎಇಯ ಖ್ಯಾತ ಗೃಹ ಆರೋಗ್ಯ ಮತ್ತು ರೋಗ ವ್ಯವಸ್ಥಾಪನೆ ಕಂಪೆನಿ ಮಂಝಿಲ್ ಹೆಲ್ತ್‌ಕೇರ್ ಸರ್ವಿಸಸ್ ತುಂಬೆ ಆಸ್ಪತ್ರೆಗಳ ಸಮೂಹದ ಜೊತೆ ಒಪ್ಪಂದಕ್ಕೆ ಸಹಿ ಹಾಕಿಕೊಂಡಿರುವುದಾಗಿ ಘೋಷಿಸಿದೆ.

ಆಸ್ಪತ್ರೆಯಿಂದ ಹೊರಬಂದ ನಂತರದ ಸೇವೆ, ಮಕ್ಕಳ ಸೇವೆ ಮತ್ತು ಹಿರಿಯರ ಸೇವೆ, ಫಿಸಿಯೊಥೆರಪಿ ಮತ್ತು ತಾಯಿ ಹಾಗೂ ಮಗುವಿನ ಸೇವೆ, ಗಾಯಕ್ಕೆ ಚಿಕಿತ್ಸೆ, ಕೃತಕ ಉಸಿರಾಟದ ವ್ಯವಸ್ಥೆ ಇತ್ಯಾದಿ ಗೃಹ ಆರೋಗ್ಯ ಸೇವೆಗಳು ಸೇರಿದಂತೆ ತುಂಬೆ ಆಸ್ಪತ್ರೆಯ ರೋಗಿಗಳಿಗೆ ಅನೇಕ ಗೃಹ ಆರೋಗ್ಯ ಸೇವೆಗಳನ್ನು ಒದಗಿಸಲು ಮಂಝಿಲ್ ಹೆಲ್ತ್‌ಕೇರ್ ಸರ್ವಿಸಸ್ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಂಝಿಲ್ ಹೆಲ್ತ್‌ಕೇರ್ ಸರ್ವಿಸಸ್‌ನ ಸಿಇಒ ಡಾ. ಸರ್ಫರ್ ತನ್ಲಿ, ಯುಎಇಯ ಜನತೆಗೆ ಅತ್ಯುನ್ನತ ಗೃಹ ಆರೋಗ್ಯ ಸೇವೆಯನ್ನು ಒದಗಿಸುವತ್ತ ನಾವು ಗಮನಹರಿಸುತ್ತಿದ್ದೇವೆ. ಸದ್ಯ ತುಂಬೆ ಆಸ್ಪತ್ರೆ ಜೊತೆ ಮಾಡಿಕೊಂಡಿರುವ ಒಪ್ಪಂದ ನಮ್ಮ ಈ ಬದ್ಧತೆಗೆ ಪ್ರಮಾಣವಾಗಿದೆ ಎಂದು ತಿಳಿಸಿದ್ದಾರೆ.

ಈ ಒಪ್ಪಂದದ ಮೂಲಕ ತುಂಬೆ ಆಸ್ಪತ್ರೆಯ ವೈದ್ಯಕೀಯ ತಜ್ಞರು ಮತ್ತು ವಿವಿಧ ವೈದ್ಯರ ಜೊತೆ ಸಂಪರ್ಕ ಸಾಧಿಸುವ ಅವಕಾಶ ಲಭಿಸುವುದರಿಂದ ಮಂಝಿಲ್ ಹೆಲ್ತ್‌ಕೇರ್ ಸರ್ವಿಸಸ್ ಸಿಬ್ಬಂದಿ ಕೂಡಾ ತಮ್ಮ ಆರೋಗ್ಯ ಸೇವೆಯ ಜ್ಞಾನವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News