ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಸುಷ್ಮಾ ಸ್ವರಾಜ್ ಕರೆ

Update: 2019-03-01 16:30 GMT

ಅಬುಧಾಬಿ,ಮಾ.1: ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಮತ್ತು ಅವುಗಳಿಗೆ ಹಣಕಾಸು ನೆರವನ್ನು ಒದಗಿಸುತ್ತಿರುವ ದೇಶಗಳ ಮೇಲೆ ಒತ್ತಡ ಹೇರಲು ಶುಕ್ರವಾರ ಇಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಭೆಯಲ್ಲಿ ಒತ್ತು ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು,ಭಯೋತ್ಪಾದನೆ ಮೂಲಸೌಕರ್ಯಗಳನ್ನು ನಿರ್ಮೂಲಗೊಳಿಸುವಂತೆ ಒಐಸಿ ಇಂತಹ ರಾಷ್ಟ್ರಗಳಿಗೆ ಸೂಚಿಸಬೇಕು ಎಂದು ಹೇಳಿದರು.

ಒಐಸಿ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು,ಮಾನವೀಯತೆಯ ರಕ್ಷಣೆಯನ್ನು ನಾವು ಬಯಸಿದ್ದರೆ ಭಯೋತ್ಪಾದಕರಿಗೆ ಆಶ್ರಯ ಮತ್ತು ಆರ್ಥಿಕ ನೆರವು ಒದಗಿಸುತ್ತಿರುವ ರಾಷ್ಟ್ರಗಳಿಗೆ ಅದನ್ನು ನಿಲ್ಲಿಸುವಂತೆ ಮತ್ತು ಭಯೋತ್ಪಾದಕ ಶಿಬಿರಗಳ ಮೂಲಸೌಕರ್ಯಗಳನ್ನು ನಿರ್ಮೂಲಗೊಳಿಸುಂತೆ ಹೇಳಲೇಬೇಕು ಎಂದರು.

ಭಯೋತ್ಪಾದನೆಯ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧ ಸಂಘರ್ಷವಲ್ಲ, ಸಂಘರ್ಷವಾಗಲು ಸಾಧ್ಯವೂ ಇಲ್ಲ ಎಂದು ಸ್ವರಾಜ್ ಪವಿತ್ರ ಗ್ರಂಥಗಳಾದ ಕುರ್‌ಆನ್, ಗುರು ಗ್ರಂಥಸಾಹಿಬ್ ಮತ್ತು ಋಗ್ವೇದಗಳಲ್ಲಿಯ ಉಕ್ತಿಗಳನ್ನು ಉಲ್ಲೇಖಿಸಿ ಹೇಳಿದರು. ಭೀತಿವಾದ ಮತ್ತು ಉಗ್ರವಾದ ವಿವಿಧ ಹೆಸರುಗಳು ಮತ್ತು ಹಣೆಪಟ್ಟಿಗಳನ್ನು ಹೊಂದಿವೆ. ಅದು ವಿವಿಧ ಕಾರಣಗಳನ್ನು ಬಳಸುತ್ತದೆ. ಆದರೆ ಪ್ರತಿ ಸಂದರ್ಭದಲ್ಲಿಯೂ ಅದು ಧರ್ಮದ ತಿರುಚುವಿಕೆ ಮತ್ತು ತನ್ನ ಶಕ್ತಿಯ ಬಗ್ಗೆ ತಪ್ಪುನಂಬಿಕೆಯಿಂದ ಪ್ರೇರಿತಗೊಂಡಿರುತ್ತದೆ ಎಂದರು.

ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಸಂಘಟಿತ ಕ್ರಮಕ್ಕೆ ಕರೆನೀಡಿದ ತನ್ನ ಭಾಷಣದಲ್ಲಿ ಪಾಕಿಸ್ತಾನದ ಹೆಸರನ್ನು ಸ್ವರಾಜ್ ಉಲ್ಲೇಖಿಸಲಿಲ್ಲ. ಆದರೆ ಭಯೋತ್ಪಾದನೆಯ ವ್ಯಾಪ್ತಿ ಹೆಚ್ಚುತ್ತಿದೆ ಮತ್ತು ನಾವು ಭಯೋತ್ಪಾದನೆಯ ಭೀಕರ ಮುಖವನ್ನು ನೋಡುತ್ತಿದ್ದೇವೆ ಎಂದರು.

ಸಭೆಯಿಂದ ದೂರವುಳಿದ ಪಾಕ್ ವಿದೇಶಾಂಗ ಸಚಿವ

ಇದೇ ಮೊದಲ ಬಾರಿ ಒಐಸಿ ಸಮ್ಮೇಳನಕ್ಕೆ ಭಾರತದ ವಿದೇಶಾಂಗ ಸಚಿವರನ್ನು ಆಹ್ವಾನಿಸಲಾಗಿದ್ದು,ಇದರಿಂದ ಅಸಮಾಧಾನಗೊಂಡ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಷಿ ಅವರು ಸಭೆಗೆ ಹಾಜರಾಗಿರಲಿಲ್ಲ.

ಶುಕ್ರವಾರ ರಾಷ್ಟ್ರೀಯ ಸಂಸತ್‌ನಲ್ಲಿ ಮಾತನಾಡಿದ ಅವರು,ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಗೌರವ ಅತಿಥಿಯಾಗಿ ಆಹ್ವಾನಿಸಿರುವುದಕ್ಕಾಗಿ ತಾತ್ವಿಕ ದೃಷ್ಟಿಯಿಂದ ತಾನು ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವುದಿಲ್ಲ. ಪಾಕಿಸ್ತಾನದ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಇತರ ಅಧಿಕಾರಗಳು ಭಾಗವಹಿಸುತ್ತಾರೆ ಎಂದು ಹೇಳಿದರು.

ಪಾಕಿಸ್ತಾನವು ಪ್ರತಿಭಟಿಸಿದ್ದರೂ ಒಐಸಿಯು ಸ್ವರಾಜ್‌ಗೆ ನೀಡಿದ ಆಹ್ವಾನವನ್ನು ರದ್ದುಗೊಳಿಸಿಲ್ಲ ಎಂದ ಅವರು, ಭಾರತೀಯ ವಿದೇಶಾಂಗ ಸಚಿವರಿಗೆ ಆಹ್ವಾನ ನೀಡುವ ಮುನ್ನ ಒಐಸಿ ಸಮಾಲೋಚಿಸಿರಲಿಲ್ಲ. ಭಾರತವು ಒಐಸಿಯ ಸದಸ್ಯ ಅಥವಾ ವೀಕ್ಷಕ ರಾಷ್ಟ್ರವಲ್ಲ ಎಂದು ಬೆಟ್ಟು ಮಾಡಿದರು. ಸ್ವರಾಜ್‌ಗೆ ಆಹ್ವಾನವನ್ನು ರದ್ದುಗೊಳಿಸುವಂತೆ ತಾನು ಯುಎಇಗೆ ಎರಡು ಪತ್ರಗಳನ್ನು ಕಳುಹಿಸಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News