‘ಲುಲು’ ಗ್ರೂಪ್‌ನ ಯೂಸುಫ್ ಅಲಿ ಜಗತ್ತಿನ ಅತಿ ಶ್ರೀಮಂತ ಮಲಯಾಳಿ

Update: 2019-03-08 16:21 GMT

ದುಬೈ, ಮಾ. 8: ‘ಲುಲು’ ಸಮೂಹ ಸಂಸ್ಥೆಗಳ ಸ್ಥಾಪಕ ಎಂ.ಎ. ಯೂಸುಫ್ ಅಲಿ ಜಗತ್ತಿನ ಅತಿ ಶ್ರೀಮಂತ ಮಲಯಾಳಿಯಾಗಿ 2019ರ ‘ಫೋರ್ಬ್ಸ್ ಬಿಲಿಯನೇರ್ಸ್’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

‘ಮಧ್ಯಪ್ರಾಚ್ಯದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ’ ಎಂದೇ ಜನಜನಿತರಾಗಿರುವ ಕೇರಳದ ತ್ರಿಶೂರ್ ನಿವಾಸಿ, 4.8 ಬಿಲಿಯ ಡಾಲರ್ (ಸುಮಾರು 33,655 ಕೋಟಿ ರೂಪಾಯಿ) ವೈಯಕ್ತಿಕ ಸಂಪತ್ತು ಹೊಂದಿದ್ದಾರೆ ಎಂದು ‘ಫೋರ್ಬ್ಸ್’ ಹೇಳಿದೆ.

ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 394ನೇ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಅವರು ಜಗತ್ತಿನ 26ನೇ ಅತಿ ಶ್ರೀಮಂತ ಭಾರತೀಯನಾಗಿದ್ದರು.

ಯೂಸುಫ್ ಅಲಿ 1973ರಲ್ಲಿ, ತನ್ನ 16ನೇ ವರ್ಷದಲ್ಲಿ ಚಿಕ್ಕಪ್ಪನ ಸಣ್ಣ ವಿತರಣೆ ವ್ಯಾಪಾರದಲ್ಲಿ ಸಹಾಯ ಮಾಡುವುದಕ್ಕಾಗಿ ಬರಿಗೈಯಲ್ಲಿ ಅಬುಧಾಬಿಗೆ ಪ್ರಯಾಣಿಸಿದರು. 1990ರ ದಶಕದ ವೇಳೆಗೆ ಅವರು ಕಂಪೆನಿಯ ಆಮದು ಮತ್ತು ಸಗಟು ವಿತರಣೆ ವಿಭಾಗವನ್ನು ವಿಸ್ತರಿಸಿದರು ಹಾಗೂ ‘ಲುಲು ಹೈಪರ್‌ಮಾರ್ಕೆಟ್’ ಸ್ಥಾಪಿಸುವ ಮೂಲಕ ಸೂಪರ್‌ ಮಾರ್ಕೆಟ್ ವ್ಯಾಪಾರಕ್ಕೆ ಇಳಿದರು.

ಕೊಲ್ಲಿ ಯುದ್ಧದ ಅವಧಿಯಲ್ಲಿ ಅವರು ಸೂಪರ್‌ ಮಾರ್ಕೆಟ್ ‌ಗಳ ಸರಣಿಯನ್ನು ಆರಂಭಿಸಿದ ಹೊರತಾಗಿಯೂ, ಅದರಲ್ಲಿ ಭಾರೀ ಯಶಸ್ಸು ಪಡೆದರು. ಶೀಘ್ರದಲ್ಲೇ ಅವರು ಮಧ್ಯಪ್ರಾಚ್ಯದ ಇತರ ವಲಯಗಳಲ್ಲೂ ಲುಲು ಅಂಗಡಿಗಳನ್ನು ಆರಂಭಿಸಿದರು.

ಇಂದು ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ಗೆ ಸೇರಿದ ಅಂಗಡಿಗಳು ವಾರ್ಷಿಕ 8.1 ಬಿಲಿಯ ಡಾಲರ್ (ಸುಮಾರು 56,790 ಕೋಟಿ ರೂಪಾಯಿ) ಮೊತ್ತದ ವ್ಯವಹಾರವನ್ನು ಮಾಡುತ್ತಿವೆ.

ಅಲಿ ಅವರ ಅಳಿಯ ಶಂಸೀರ್ ವಯಾಲಿಲ್ ಲುಲುಸ್ ಹೆಲ್ತ್‌ಕೇರ್ ವ್ಯಾಪಾರ ನಡೆಸುತ್ತಿದ್ದಾರೆ.

ತನ್ನ ಕೇರಳ ರಾಜ್ಯದಲ್ಲೂ ಯೂಸುಫ್ ಅಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ‘ಫೋರ್ಬ್ಸ್’ ಹೇಳಿದೆ. ಕೊಚ್ಚಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರು ಗಣನೀಯ ಪ್ರಮಾಣದ ಹೂಡಿಕೆ ಮಾಡಿದ್ದಾರೆ.

2016ರಲ್ಲಿ ಅವರು ಲಂಡನ್‌ನ ವೈಟ್‌ಹಾಲ್‌ನಲ್ಲಿರುವ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಠಾಣೆ ಕಟ್ಟಡವನ್ನು 170 ಮಿಲಿಯ ಡಾಲರ್ (ಸುಮಾರು 1,190 ಕೋಟಿ ರೂಪಾಯಿ)ಗೆ ಖರೀದಿಸಿದ್ದರು. ಆ ಕಟ್ಟಡ ಈಗ ವಿಲಾಸಿ ಹೊಟೇಲ್ ಆಗಿದೆ.

►48,000 ಉದ್ಯೋಗಿಗಳು

ಇಂದು ಮಧ್ಯ ಪ್ರಾಚ್ಯ ಮತ್ತು ಕೇರಳದಲ್ಲಿ ಹರಡಿರುವ ಲುಲು ಗ್ರೂಪ್‌ನ 150ಕ್ಕೂ ಅಧಿಕ ಅಂಗಡಿಗಳಲ್ಲಿ 48,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಲುಲು ಗ್ರೂಪ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಭಾರತೀಯ ನೌಕರರ ಅತ್ಯಂತ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News