ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಯುಎಇ ಫಾರ್ಮಸಿ ಶಿಕ್ಷಣ ಸಮ್ಮೇಳನ

Update: 2019-03-09 17:44 GMT

ದುಬೈ, ಮಾ. 9: ಯುಎಇ ಶಿಕ್ಷಣ ಸಚಿವಾಲಯದ ಶೈಕ್ಷಣಿಕ ಮಾನ್ಯತೆ ಆಯೋಗ ಆಯೋಜಿಸಿದ್ದ ಯುಎಇ ಫಾರ್ಮಸಿ ಶಿಕ್ಷಣ ಸಮ್ಮೇಳನದ ಆತಿಥ್ಯವನ್ನು ಮಧ್ಯಪಾದ್ರಚ್ಯದ ಮುಂಚೂಣಿಯ ವೈದ್ಯಕೀಯ ವಿಶ್ವವಿದ್ಯಾನಿಲಯ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ವಹಿಸಿತ್ತು.

ಫಾರ್ಮಸಿ ಶಿಕ್ಷಣ, ಶೈಕ್ಷಣಿಕ, ಫಾರ್ಮಸಿ ವಿಜ್ಞಾನ ಮತ್ತು ಮಾನ್ಯತೆ ಕ್ಷೇತ್ರದ ಪರಿಣತರು ಭಾಗವಹಿಸಿದ್ದ ಈ ಸಮ್ಮೇಳನದಲ್ಲಿ ದೇಶದಲ್ಲಿ ಫಾರ್ಮಸಿ ಶಿಕ್ಷಣದ ಮಟ್ಟವನ್ನು ಉತ್ತಮಗೊಳಿಸಲು ಕ್ರಿಯಾ ಯೋಜನೆ ಮತ್ತು ನೀಲಿನಕ್ಷೆ, ಭವಿಷ್ಯದ ಫಾರ್ಮಸಿ ಪದವೀಧರರಲ್ಲಿ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಕೌಶಲ್ಯ, ಜ್ಞಾನ ಮತ್ತು ದೃಷ್ಟಿಕೋನವನ್ನು ಸೃಷ್ಟಿಸುವ ಮತ್ತು ಬದಲಾಗುತ್ತಿರುವ ಫಾರ್ಮಸಿ ವಿಧಾನದ ಸ್ವಭಾವದಲ್ಲಿ ಹೆಚ್ಚಿನ ಪಾತ್ರವನ್ನು ನಿಬಾಯಿಸುವ ಕುರಿತು ಚರ್ಚೆ ನಡೆಸಲಾಯಿತು.

ಫಾರ್ಮಸಿ ಶಿಕ್ಷಣ ಮಾನ್ಯತೆ ಮಂಡಳಿ (ಯುಎಸ್‌ಎ) ಮತ್ತು ಅಮೆರಿಕನ್ ಪಾರ್ಮಸಿ ಕಾಲೇಜುಗಳ ಸಂಘಟನೆ (ಯುಎಸ್‌ಎ) ಸಹಯೋಗದಲ್ಲಿ 2019 ಮಾ.6 ಮತ್ತು 7ರಂದು ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಮೊದಲ ದಿನದ ಅಧಿವೇಶನದಲ್ಲಿ ತಜ್ಞರು ಫಾರ್ಮಸಿ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಅಧಿವೇಶನದಲ್ಲಿ ಮಾತನಾಡಿದ ಶೈಕ್ಷಣಿಕ ಮಾನ್ಯತೆ ಆಯೋಗದ ನಿರ್ದೇಶಕ ಪ್ರೊ. ಮುಹಮ್ಮದ್ ಯೂಸಿಫ್ ಬನಿಯಾಸ್ ದೇಶದಲ್ಲಿ ಫಾರ್ಮಸಿ ಅಧ್ಯಯನಕ್ಕಾಗಿ ಉನ್ನತ ಶಿಕ್ಷಣವನ್ನು ನೀಡುವ ಮತ್ತು ಫಾರ್ಮಸಿಯಲ್ಲಿ ಆನ್ವಯಿಕ ಕಲಿಕೆಯನ್ನು ಹೆಚ್ಚಿಸಲು ಮತ್ತು ಸಂಸ್ಥೆಗಳಲ್ಲಿ ಅಂತರ್‌ ರಾಷ್ಟ್ರೀಯ ಮಾನ್ಯತೆಗಳನ್ನು ಒದಗಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಭವಿಷ್ಯದಲ್ಲಿ ರೋಗ ವ್ಯವಸ್ಥಾಪನೆ ಮತ್ತು ಒಟ್ಟಾರೆ ರೋಗಿಯ ಆರೈಕೆಯಲ್ಲಿ ಫಾರ್ಮಸಿಸ್ಟ್‌ಗಳು ಹೆಚ್ಚಿನ ಪಾತ್ರವನ್ನು ವಹಿಸಲಿದ್ದಾರೆ ಎಂದು ಎಮಿರೇಟ್ಸ್ ವೈದ್ಯಕೀಯ ಸಂಘಟನೆ, ಯುಎಇ ಇದರ ಮಾಧ್ಯಮ ಮತ್ತು ಅಂತರ್‌ ರಾಷ್ಟ್ರೀಯ ಸಂಬಂಧಗಳು, ಫಾರ್ಮಸಿ ವಿಭಾಗದ ಮುಖ್ಯಸ್ಥ ಡಾ. ಮರಿಯಮ್ ಗಲದರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News