ದುಬೈ: ಸಂಘಪರಿವಾರ ಮುಖ್ಯಸ್ಥ ಭಾಗವತ್ ಆಪ್ತ ಅರ್ಚಕನ ಬಂಧನ

Update: 2019-03-10 17:35 GMT

ಹೊಸದಿಲ್ಲಿ,ಮಾ.10: ದುಬೈಯ ಪ್ರತಿಷ್ಠಿತ ಮನೆತನವನ್ನು ವಂಚಿಸಿದ ಆರೋಪದಲ್ಲಿ ಮಹಾರಾಷ್ಟ್ರದ ನಾಸಿಕ್ ನಿವಾಸಿ ಅರ್ಚಕನನ್ನು ದುಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನ್ಯಾಶನಲ್ ಹೆರಾಲ್ಡ್ ವರದಿ ಮಾಡಿದೆ.

ಬಂಧಿತ ಅರ್ಚಕನ ಹೆಸರು ಪ್ರಭಾಕರ್ ಎಂದಾಗಿದ್ದು ಇವರು ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಆಪ್ತರಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ನಿಧಿ ಸಂಗ್ರಹಕ್ಕಾಗಿ ಮನೆತನದ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರಾಜಮನೆತನ ಸದಸ್ಯರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅರ್ಚಕನನ್ನು ಬಂಧಿಸಲಾಗಿದ್ದರೂ ಈ ಬಗ್ಗೆ ದುಬೈ ಪೊಲೀಸ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ವರದಿ ತಿಳಿಸಿದೆ.

ಭಾರತೀಯ ಪ್ರಧಾನ ಕಾನ್ಸುಲ್ ಜನರಲ್ ವಿಪುಲ್ ಅವರು ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಪ್ರಭಾಕರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿ ಸಮರ್ಪಕ ಉತ್ತರ ನೀಡಲಿಲ್ಲ ಎಂದು ವರದಿ ತಿಳಿಸಿದೆ. ದುಬೈ ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯ ಪಾಸ್‌ಪೋರ್ಟ್‌ನಲ್ಲಿ ಅವರ ಹೆಸರು ಸುಧೀರ್ ಪ್ರಭಾಕರ್ ಪೂಜಾರಿ ಎಂದು ಬರೆಯಲಾಗಿದೆ. ಪ್ರಭಾಕರ್ ಅವರ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದು ಫೇಸ್‌ಬುಕ್‌ನಲ್ಲಿ ಅವರ ಹೆಸರು ಮಹಾಂತ ಸುಧೀರ್ ದಾಸ್ ಪೂಜಾರಿ ಮಹಾರಾಜ್ ಎಂದು ತಿಳಿಸಲಾಗಿದೆ ಎಂದು ನ್ಯಾಶನಲ್ ಹೆರಾಲ್ಡ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News