ಯುಎಇ: ಎಲ್ಲ ಭಾರತೀಯ ಪದವಿಗಳಿಗೆ ‘ತತ್ಸಮಾನ’ ಘೋಷಣೆ

Update: 2019-03-31 16:56 GMT

ದುಬೈ, ಮಾ. 31: ನಿಗದಿತ ಮಾನದಂಡಗಳಿಗೆ ಹೊಂದುವ ಎಲ್ಲ ಭಾರತೀಯ ಪದವಿಗಳಿಗೆ ಯುಇಎ ಸರಕಾರವು ತತ್ಸಮಾನಗಳನ್ನು ಘೋಷಿಸಲಿದೆ. ಯುಎಇಯಲ್ಲಿ ಉದ್ಯೋಗ ಪಡೆಯಲು ಸಮಸ್ಯೆಗಳನ್ನು ಎದುರಿಸುತ್ತಿದ್ದ ಭಾರತೀಯರಿಗೆ ಆ ದೇಶದ ಈ ಕ್ರಮವು ನೆಮ್ಮದಿ ತಂದಿದೆ.

ಆಂತರಿಕ/ಬಾಹ್ಯ ಅಂಕಗಳಿಗೆ ಸಂಬಂಧಿಸಿ ಸ್ಪಷ್ಟತೆಯ ಕೊರತೆ ಇದ್ದ ಕಾರಣಕ್ಕಾಗಿ ಕೆಲವು ಭಾರತೀಯ ಪದವಿಗಳ ತತ್ಸಮಾನಗಳನ್ನು ಯುಎಇ ಅಧಿಕಾರಿಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಯುಎಇಯಲ್ಲಿರುವ ಭಾರತೀಯರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂಬುದಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಕಳೆದ ವಾರ ಯುಎಇಯ ಶಿಕ್ಷಣ ಸಚಿವ ಹುಸೈನ್ ಬಿನ್ ಇಬ್ರಾಹೀಮ್‌ರನ್ನು ಭೇಟಿಯಾಗಿದ್ದರು ಎಂದು ಅದು ಹೇಳಿದೆ.

‘‘ಈ ಭೇಟಿಯ ಬಳಿಕ, ಇತರ ಎಲ್ಲ ಪ್ರಮಾಣಪತ್ರ ತತ್ಸಮಾನತೆ ಮಾನದಂಡಗಳನ್ನು ಪೂರೈಸುವ ಪದವಿಗಳಿಗೆ ತತ್ಸಮಾನಗಳನ್ನು ಘೋಷಿಸಲು ತನಗೆ ಯಾವುದೇ ಆಕ್ಷೇಪವಿಲ್ಲ ಎಂಬುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಿಕ್ಷಣ ಸಚಿವಾಲಯ ಅಧಿಸೂಚನೆ ಹೊರಡಿಸಿದೆ ಎನ್ನುವುದನ್ನು ತಿಳಿಸಲು ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂತೋಷಪಡುತ್ತದೆ’’ ಎಂದು ಹೇಳಿಕೆ ತಿಳಿಸಿದೆ.

ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ನೀಡಿರುವ ಸ್ಪಷ್ಟೀಕರಣವನ್ನು ಯುಎಇ ಶಿಕ್ಷಣ ಸಚಿವಾಲಯ ಪರಿಶೀಲಿಸಿದೆ ಎಂದು ಅದು ಹೇಳಿದೆ.

ಕೆಲವು ಭಾರತೀಯ ಅಂಕಪಟ್ಟಿಗಳಲ್ಲಿ ಮುದ್ರಿತವಾಗಿರುವ ‘ಎಕ್ಸ್‌ಟರ್ನಲ್’ (ಬಾಹ್ಯ) ಎನ್ನುವ ಪದವು ವೌಲ್ಯಮಾಪನ ವಿಧಾನವನ್ನು ಸೂಚಿಸುತ್ತದೆಯೇ ಹೊರತು, ಅಧ್ಯಯನ ಸ್ಥಳವನ್ನಲ್ಲ ಎಂಬುದಾಗಿ ಯುಜಿಸಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News