ಸೌದಿ ಜೈಲಿನಲ್ಲಿ ರಾಜಕೀಯ ಕೈದಿಗಳಿಗೆ ದೈಹಿಕ ಹಿಂಸೆ: ವೈದ್ಯಕೀಯ ವರದಿಗಳಿಂದ ಬಹಿರಂಗ

Update: 2019-04-01 17:57 GMT

ಲಂಡನ್, ಎ. 1: ಸೌದಿ ಅರೇಬಿಯದ ರಾಜಕೀಯ ಕೈದಿಗಳು ಅಪೌಷ್ಟಿಕತೆ, ಗಾಯಗಳು, ತರಚು ಗಾಯಗಳು ಮತ್ತು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂಬುದಾಗಿ ಸೋರಿಕೆಯಾಗಿರುವ ವೈದ್ಯಕೀಯ ವರದಿಗಳು ಹೇಳಿವೆ.

ಈ ವೈದ್ಯಕೀಯ ವರದಿಗಳನ್ನು ದೇಶದ ದೊರೆ ಸಲ್ಮಾನ್‌ಗಾಗಿ ಸಿದ್ಧಪಡಿಸಲಾಗಿದೆ ಎಂಬುದಾಗಿ ಭಾವಿಸಲಾಗಿದೆ.

 ರಾಜಕೀಯ ಕೈದಿಗಳು ತೀವ್ರ ದೈಹಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದಕ್ಕೆ ಇದು ರಾಜ ಆಸ್ಥಾನದಿಂದಲೇ ಬಂದ ಮೊದಲ ದಾಖಲಿತ ಪುರಾವೆಯಾಗಿದೆ ಎನ್ನಲಾಗಿದೆ.

ಆದರೆ, ಜೈಲಿನಲ್ಲಿರುವ ಪುರುಷರು ಮತ್ತು ಮಹಿಳೆಯರಿಗೆ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪಗಳನ್ನು ಸೌದಿ ಸರಕಾರ ನಿರಾಕರಿಸುತ್ತಲೇ ಬಂದಿದೆ.

ಈ ವೈದ್ಯಕೀಯ ವರದಿಗಳನ್ನು ದೊರೆ ಸಲ್ಮಾನ್‌ಗೆ ಸಲ್ಲಿಸಲಾಗುತ್ತದೆ ಹಾಗೂ ಅದರೊಂದಿಗೆ ಹಲವು ಶಿಫಾರಸುಗಳನ್ನೂ ನೀಡಲಾಗುತ್ತದೆ ಎಂದು ಬ್ರಿಟನ್ ಪತ್ರಿಕೆ ‘ದ ಗಾರ್ಡಿಯನ್’ ವರದಿ ಮಾಡಿದೆ.

ಎಲ್ಲ ರಾಜಕೀಯ ಕೈದಿಗಳಿಗೆ ಕ್ಷಮೆ ನೀಡಬೇಕು ಅಥವಾ ಗಂಭೀರ ಆರೋಗ್ಯ ಸಮಸ್ಯೆಗಳಿರುವವರನ್ನು ಮುಂಚಿತವಾಗಿಯಾದರೂ ಬಿಡುಗಡೆ ಮಾಡಬೇಕು ಎಂಬ ಶಿಫಾರಸುಗಳನ್ನು ಮಾಡಲಾಗಿದೆ ಎನ್ನಲಾಗಿದೆ.

ದೊರೆ ಆದೇಶ ನೀಡಿದ್ದಾರೆ ಎನ್ನಲಾದ ಆಂತರಿಕ ಪರಿಶೀಲನೆಯ ಭಾಗವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 60 ಕೈದಿಗಳ ವೈದ್ಯಕೀಯ ಪರಿಶೀಲನೆಗೆ ದೊರೆ ಅಂಗೀಕಾರ ನೀಡಿದ್ದಾರೆ ಎನ್ನಲಾಗಿದೆ. ಈ ಪೈಕಿ ಹೆಚ್ಚಿನವರು ಮಹಿಳೆಯರು.

ಕೆಲವು ವರದಿಗಳು ‘ದ ಗಾರ್ಡಿಯನ್’ಗೆ ಸೋರಿಕೆಯಾಗಿವೆ. ಈ ವೈದ್ಯಕೀಯ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪತ್ರಿಕೆಯು ಒಂದು ವಾರದ ಹಿಂದೆಯೇ ಸೌದಿ ಸರಕಾರವನ್ನು ಕೋರಿತ್ತು.

ಸೌದಿ ಸರಕಾರದ ವಕ್ತಾರರೋರ್ವರು ಈ ವಿಷಯದ ಬಗ್ಗೆ ಚರ್ಚಿಸಲು ನಿರಾಕರಿಸಿದರು. ಆದರೆ, ವರದಿಗಳ ಸಾಚಾತನವನ್ನು ಅಧಿಕಾರಿಗಳು ಪ್ರಶ್ನಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News